ADVERTISEMENT

‘ಬಿಜೆಪಿ ಬೇರೂರಲು ಅನಂತಕುಮಾರ ಶ್ರಮ ಅಪಾರ’

ಅನಂತಕುಮಾರ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 16:33 IST
Last Updated 12 ನವೆಂಬರ್ 2018, 16:33 IST
ಬೆಳಗಾವಿಯಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ಅನಂತಕುಮಾರ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಮುಖಂಡರಾದ ಆರ್‌.ಎಸ್‌. ಮುತಾಲಿಕ ದೇಸಾಯಿ, ಶಂಕರಗೌಡ ಪಾಟೀಲ, ರಾಜೇಂದ್ರ ಹರಕುಣಿ, ಡಾ.ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಉಜ್ವಲಾ ಬಡವಣಾಚೆ ಉಪಸ್ಥಿತರಿದ್ದರು
ಬೆಳಗಾವಿಯಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ಅನಂತಕುಮಾರ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಮುಖಂಡರಾದ ಆರ್‌.ಎಸ್‌. ಮುತಾಲಿಕ ದೇಸಾಯಿ, ಶಂಕರಗೌಡ ಪಾಟೀಲ, ರಾಜೇಂದ್ರ ಹರಕುಣಿ, ಡಾ.ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಉಜ್ವಲಾ ಬಡವಣಾಚೆ ಉಪಸ್ಥಿತರಿದ್ದರು   

ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಅನಂತಕುಮಾರ ಅವರ ಶ್ರಮ ಸಾಕಷ್ಟಿದೆ ಎಂದು ಪಕ್ಷದ ಮುಖಂಡ ಆರ್‌.ಎಸ್‌. ಮುತಾಲಿಕ ದೇಸಾಯಿ ಸ್ಮರಿಸಿದರು.

ನಗರದಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ದಿವಂಗತ ಅನಂತಕುಮಾರ ಅವರಿಗೆ ಶ್ರದ್ಧಾಂಜಲಿ ಅರ್ಪಣಾ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದಲ್ಲಿ ವಿವಿಧ ಖಾತೆಗಳ ಸಚಿವರಾಗಿದ್ದ ಅನಂತಕುಮಾರ ಹಲವು ಕೊಡುಗೆ ನೀಡಿದರು. ಜನೌಷಧಿ ಮಳಿಗೆಗಳನ್ನು ತೆರೆದಿದ್ದರು. ಹೃದಯನಾಳದಲ್ಲಿ ರಿಯಾಯಿತಿ ದರದಲ್ಲಿ ಸ್ಟಂಟ್ ಅಳವಡಿಸಲು ಕ್ರಮಕೈಗೊಂಡಿದ್ದರು. ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದ್ದ ಯೂರಿಯಾ ಗೊಬ್ಬರವು ಕಾಳಸಂತೆಯಲ್ಲಿ ಮಾರಾಟವಾಗದಂತೆ ತಡೆಗಟ್ಟಿದ್ದರು ಎಂದು ಸ್ಮರಿಸಿದರು.

ADVERTISEMENT

ವಕೀಲಎಂ.ಬಿ. ಝಿರಲಿ ಮಾತನಾಡಿ, ಅನಂತಕುಮಾರ ಅವರು ವಿದ್ಯಾರ್ಥಿ ದಿಸೆಯಿಂದಲೇ ಸಾಮಾಜಿಕ, ಶೈಕ್ಷಣಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯಕರ್ತರೊಂದಿಗೆ ಆತ್ಮೀಯತೆ ಹೊಂದಿದ್ದರು. ಇಂದಿನ ಕಾರ್ಯಕರ್ತರಿಗೆ ಅವರು ಮಾದರಿ ನಾಯಕರಾಗಿದ್ದರು. ರಾಜ್ಯದಲ್ಲಿ ಅಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲೂ ಪಕ್ಷ ಸಂಘಟನೆ ಮಾಡಿದ್ದರು ಎಂದು ಹೇಳಿದರು.

ಪಕ್ಷದ ಮುಖಂಡ ಸಂಜಯ ಪಾಟೀಲ ಮಾತನಾಡಿ, ದೇಶದಲ್ಲಿ ಬಿಜೆಪಿ ಬೆಳೆಯಲು ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ. ಅಡ್ವಾಣಿ ಕಾರಣರಾದಂತೆ ರಾಜ್ಯದಲ್ಲಿ ಅನಂತಕುಮಾರ ಹಾಗೂ ಬಿ.ಎಸ್‌. ಯಡಿಯೂರಪ್ಪ ಜೋಡಿ ಕಾರಣ. ಅನಂತಕುಮಾರ ಅವರು ವಾಜಪೇಯಿ ಹಾಗೂ ನರೇಂದ್ರ ಮೋದಿಯವರ ಆಡಳಿತದಲ್ಲಿ ಸಚಿವರಾಗಿದ್ದರು. ಇಬ್ಬರೊಂದಿಗೂ ಆತ್ಮೀಯತೆ ಹೊಂದಿದ್ದರು ಎಂದು ಹೇಳಿದರು.

ಕೆಲವು ವರ್ಷಗಳ ಹಿಂದೆ ಚಿಕ್ಕೋಡಿಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ‘ಕನ್ನಡ, ಹಿಂದಿ, ಮರಾಠಿ 3 ಭಾಷೆಯನ್ನು ಬಳಸಿ ನಾನು ಭಾಷಣ ಮಾಡಿದ್ದಕ್ಕೆ, ವೇದಿಕೆಯಲ್ಲೇ ನನ್ನನ್ನು ಕರೆದ ಅನಂತಕುಮಾರ ಇನ್ನು ಮುಂದೆ ನಿನಗೆ ‘ಮಿಸಾಳ ಪಾವ್ ಸಂಜು’ ಎಂದು ಕರೆಯುತ್ತೇನೆ ಎಂದು ಹೇಳಿದ್ದರು. ಅವರ ಪ್ರೋತ್ಸಾಹ ನನ್ನನ್ನು ಪಕ್ಷದಲ್ಲಿ ಮತ್ತಷ್ಟು ಕ್ರಿಯಾಶೀಲನಾಗುವಂತೆ ಮಾಡಿತ್ತು ಎಂದು ಸ್ಮರಿಸಿದರು.

ಶಂಕರಗೌಡ ಪಾಟೀಲ ಮಾತನಾಡಿ, ಅನಂತಕುಮಾರ ಅವರಿಗೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಮೇಲೆ ವಿಶೇಷ ಕಾಳಜಿ ಇತ್ತು. ಅವರು ಪಕ್ಷ ಸಂಘಟನೆಗೆರಾಜ್ಯದ ಅನೇಕ ಭಾಗಗಳಲ್ಲಿಸೈಕಲ್ ಮೇಲೆ ಸುತ್ತಿದ್ದರು. ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಆಗಿದ್ದ ಅವರ ತಾಯಿಯೇ ಅವರ ರಾಜಕೀಯ, ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆಯಾಗಿದ್ದರು. ಅವರು ‘ನಿಮ್ಮ ಅನಂತ’ ಎಂಬ ಪತ್ರಿಕೆಯನ್ನು ಹೊರತಂದಿದ್ದರು ಎಂದು ತಿಳಿಸಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ ಮಾತನಾಡಿ, ಅನಂತಕುಮಾರ ಅವರು ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಉತ್ತಮ ಸಂಸದೀಯ ಪಟುವಾಗಿದ್ದರು. ವಿರೋಧ ಪಕ್ಷದ ಮುಖಂಡರೊಂದಿಗೂ ಸಹ ಉತ್ತಮ ಬಾಂಧವ್ಯ ಹೊಂದಿದ್ದರು. ಕಾರ್ಯಕರ್ತರನ್ನು ಸದಾಕಾಲ ಪ್ರೋತ್ಸಾಹಿಸುತ್ತಿದ್ದರು ಎಂದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಉಜ್ವಲಾ ಬಡವಣಾಚೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.