ಚಿಕ್ಕೋಡಿ: ತಾಲ್ಲೂಕಿನ ಕಬ್ಬೂರ ಪಟ್ಟಣದಲ್ಲಿರುವ 12ನೇ ಶತಮಾನದ ಚಾಲುಕ್ಯರ ಕಾಲದ ಕಲ್ಮೇಶ್ವರ ದೇವಸ್ಥಾನ ನೋಡಲು ಸುಂದರವಾಗಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಆದರೆ, ಇಂಥ ಸುಂದರ ಮಂದಿರ ಇಲ್ಲಿದೆ ಎಂಬ ಅರಿವೇ ಇಲ್ಲದಂತಾಗಿದೆ.
ರಟ್ಟರ ಕಾಲದ (ಕ್ರಿ.ಶ 1126) ಕಾರ್ತವೀರ್ಯನ ದಾಖಲೆಯಲ್ಲಿ ‘ಪಿರಿಯ ಅಗ್ರಹಾರ ಕರ್ಬೂರು’ ಎಂದು ಉಲ್ಲೇಖಿಸಲಾಗಿದೆ. ಈ ಶಾಸನ ಕಲ್ಮೇಶ್ವರ ದೇವಸ್ಥಾನದ ಕಂಬದ ಮೇಲೆ ಕಂಡುಬಂದಿದೆ. ಹೀಗಾಗಿಯೇ ಕರ್ಬೂರು– ಕಬ್ಬೂರ ಆಗಿ ಪರಿವರ್ತನೆಯಾಗಿದೆ. ಕರ್ಬು ಎಂದರೆ ಕಬ್ಬು ಎಂದರ್ಥವಿದ್ದು, ಇಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುತ್ತಿದ್ದರಿಂದ ಕಬ್ಬೂರ ಎಂಬ ಹೆಸರು ಬಂದಿದ್ದಾಗಿ ಇಲ್ಲಿನ ಶಿಲಾ ಶಾಸನಗಳಿಂದ ತಿಳಿದುಬರುತ್ತದೆ.
ಕಬ್ಬೂರಿನ ಐತಿಹಾಸಿಕ ಕಲ್ಮೇಶ್ವರ ದೇವಸ್ಥಾನ ಚಾಲುಕ್ಯರ ಶೈಲಿಯ ಮೂರು ಗರ್ಭಗೃಹಗಳನ್ನು ( ತ್ರಿಕೂಟಾಚಲ) ಹೊಂದಿದ್ದು, ವಿಶಾಲವಾದ ನವರಂಗ ಹಾಗೂ ಪ್ರತ್ಯೇಕ ಮುಖ ಮಂಟಪ ಹೊಂದಿದೆ. ನವರಂಗದ ಒಂದು ಕಂಬದಲ್ಲಿ ರಟ್ಟ ಕಾರ್ತವೀರ್ಯನ ಶಾಸನವಿದೆ.
ಇದೇ ಪಟ್ಟಣದಲ್ಲಿ ಸಿದ್ದೇಶ್ವರ ದೇವಾಲಯ, ಭೂತಾಳ ಸಿದ್ದೇಶ್ವರ ದೇವಾಲಯ, ವಿಠ್ಠಲ ಮಂದಿರ, ಇಟ್ರಾಯ ಮತ್ತು ಲಕ್ಷ್ಮೀಗುಡಿ ಮುಂತಾದ ಐತಿಹಾಸಿಕ ದೇವಾಲಯಗಳಿವೆ. 1648ರಲ್ಲಿ ನಿರ್ಮಿಸಿದ ವಿಷ್ಣು ದೇವಾಲಯ, ಆದಿಲ್ ಶಾಹಿ ಕಾಲದ ಮಸೀದಿ ಇದೆ. ಇಷ್ಟೆಲ್ಲ ಶ್ರೀಮಂತ ಪರಂಪರೆ ಹೊಂದಿದ್ದರೂ ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾಗಿ ಅಭಿವೃದ್ಧಿಯಿಂದ ವಂಚಿತವಾಗಿದೆ.
ಇಲ್ಲಿನ ಎಲ್ಲ ಸ್ಮಾಕರಗಳನ್ನು ರಕ್ಷಿಸಿ, ಅವುಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿ ಪಡಿಸುವ ಇಚ್ಛಾಶಕ್ತಿಯನ್ನು ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆ ತೋರಬೇಕಿದೆ ಎಂಬುದು ಜನರ ಆಗ್ರಹ.
ಅಳಿವಿನಂಚಿನಲ್ಲಿರುವ ಐತಿಹಾಸಿಕ ದೇವಸ್ಥಾನಗಳ ರಕ್ಷಣೆ ಮಾಡಬೇಕಾದ ಗುರುತರ ಜವಾಬ್ದಾರಿಯನ್ನು ಸಂಬಂಧಿಸಿದ ಇಲಾಖೆ ಮಾಡಬೇಕಿದೆಸುನೀಲ ಕುಲಕರ್ಣಿ ಕಬ್ಬೂರ
ಕಲ್ಮೇಶ್ವರ ದೇವಸ್ಥಾನದ ಸುತ್ತ ಪಟ್ಟಣ ಪಂಚಾಯಿತಿಯಿಂದ ನೆಲಹಾಸು ಹಾಕಿಸಲಾಗಿದೆ. ಸುತ್ತಮುತ್ತಲಿನ ಕಂಟಿ ಕಡಿದು ಸ್ವಚ್ಛಗೊಳಿಸಲಾಗಿದೆಹಾಲಸಿದ್ಧ ಸುಳನ್ನವರ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕಬ್ಬೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.