ADVERTISEMENT

3 ದಶಕ ಕಳೆದರೂ ಈಡೇರದ ಬೇಡಿಕೆ: ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಡಗಳೇ ಗತಿ!

ಪ್ರಜಾವಾಣಿ ವಿಶೇಷ
Published 12 ಫೆಬ್ರುವರಿ 2026, 5:57 IST
Last Updated 12 ಫೆಬ್ರುವರಿ 2026, 5:57 IST
<div class="paragraphs"><p>ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಕಲಿಕೆಯಲ್ಲಿ ತೊಡಗಿರುವ ಮಕ್ಕಳು.</p></div>

ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಕಲಿಕೆಯಲ್ಲಿ ತೊಡಗಿರುವ ಮಕ್ಕಳು.

   

ಚಿಕ್ಕೋಡಿ: ತಾಲ್ಲೂಕು ವ್ಯಾಪ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 260 ಅಂಗನವಾಡಿ ಕೇಂದ್ರಗಳಿದ್ದು, ಇವುಗಳಲ್ಲಿ 79 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಬ್ಬೂರ ಪಟ್ಟಣದಲ್ಲಿ 7 ಅಂಗನವಾಡಿ ಕೇಂದ್ರಗಳಿದ್ದು, ಮೂರು ದಶಕಗಳಿಂದಲೂ ಸ್ವಂತ ಕಟ್ಟಡ ಇಲ್ಲ.

2011ರ ಜನಗಣತಿಯಂತೆ ಕಬ್ಬೂರ ಪಟ್ಟಣದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಕಳೆದ ಹತ್ತು ವರ್ಷಗಳಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಪಟ್ಟಣದಲ್ಲಿ 7 ಅಂಗನವಾಡಿ ಕೇಂದ್ರಗಳಿದ್ದರೂ, ಏಳಕ್ಕೆ ಏಳೂ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರಣ ಮಹಿಳೆಯರು ಹಾಗೂ ಮಕ್ಕಳು ಮೂಲಸೌಕರ್ಯಗಳಿಲ್ಲದೇ ಪರದಾಡುವಂತಾಗಿದೆ.

ADVERTISEMENT

ಅಂಗನವಾಡಿ ಕೇಂದ್ರ ಸಂಖ್ಯೆ 6ರಲ್ಲಿ 78, ಕೇಂದ್ರ ಸಂಖ್ಯೆ 97ರಲ್ಲಿ 69, ಕೇಂದ್ರ ಸಂಖ್ಯೆ 105ರಲ್ಲಿ 72, ಕೇಂದ್ರ ಸಂಖ್ಯೆ 96ರಲ್ಲಿ 72, ಕೇಂದ್ರ ಸಂಖ್ಯೆ 104ರಲ್ಲಿ 78, ಕೇಂದ್ರ ಸಂಖ್ಯೆ 95ರಲ್ಲಿ 77, ಕೇಂದ್ರ ಸಂಖ್ಯೆ 241ರಲ್ಲಿ 68 ಮಕ್ಕಳು ಸೇರಿದಂತೆ ಒಟ್ಟು 514 ಮಕ್ಕಳಿದ್ದಾರೆ. 6 ವರ್ಷದೊಳಗಿನ ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ, ಪೌಷ್ಟಿಕಾಂಶ ಮಟ್ಟವನ್ನು ಹೆಚ್ಚಿಸುವುದು ಅಂಗನವಾಡಿ ಕೇಂದ್ರಗಳ ಉದ್ದೇಶವಾಗಿದೆ.

ಪಟ್ಟಣದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡಗಳು ಇಲ್ಲದ್ದರಿಂದ ಶುದ್ಧ ಕುಡಿಯುವ ನೀರು, ಶೌಚಾಲಯ, ಆಟವಾಡಲು ಮಕ್ಕಳಿಗೆ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಬಾಡಿಗೆ ಕಟ್ಟಡದಲ್ಲಿ ನಿರ್ವಹಣೆಯಾಗುತ್ತಿರುವ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಕಿಟಕಿಗಳೇ ಇಲ್ಲದಂತಾಗಿದೆ. ಶುದ್ಧ ಗಾಳಿ ಹಾಗೂ ಬೆಳಕು ಮರೀಚಿಕೆಯಾಗಿದೆ. ಗುಣಮಟ್ಟದ ಕಟ್ಟಡಗಳು ಇಲ್ಲದ್ದರಿಂದ ಮಕ್ಕಳ ಬಾಲ್ಯದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಾಡಿಗೆ ಕಟ್ಟಡದಲ್ಲಿ ಇರುವ ಅಂಗನವಾಡಿ ಕೇಂದ್ರಗಳಲ್ಲಿ ಸುಸಜ್ಜಿತ ಅಡುಗೆ ಕೋಣೆ, ದಾಸ್ತಾನು ಕೋಣೆಗಳು ಇಲ್ಲದಂತಾಗಿದೆ.

ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸುವುದಿಲ್ಲ. ಬಡವರು, ಕೂಲಿಕಾರ್ಮಿಕರು ಹಾಗೂ ಜನಸಾಮಾನ್ಯರ ಮಕ್ಕಳು ಹೆಚ್ಚಾಗಿ ಅಂಗನವಾಡಿ ಕೇಂದ್ರಗಳಿಗೆ ಹೋಗುತ್ತಾರೆ. ಹೀಗಾಗಿ ಕಳೆದ ಮೂರು ದಶಕಗಳಿಂದ ಸ್ವಂತ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುವ ಗೋಜಿಗೆ ಸ್ಥಳೀಯ ಜನಪ್ರತಿನಿಧಿಗಳಾಗಲೀ, ಸಂಬಂಧಿಸಿದ ಅಧಿಕಾರಿಗಳಾಗಲೀ ಮನಸ್ಸು ಮಾಡುತ್ತಿಲ್ಲ. ಅದರಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆಯ ತವರು ಜಿಲ್ಲೆಯಲ್ಲಿಯೇ ಇಂತಹದೊಂದು ದುಃಸ್ಥಿತಿ ಇರುವುದು ವ್ಯವಸ್ಥೆಯನ್ನು ಅಣಕಿಸುವಂತಿದೆ.

ಕಬ್ಬೂರ ಪಟ್ಟಣ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಇದ್ದರೂ ಅಂಗನವಾಡಿ ಕೇಂದ್ರಗಳಿಗೆ ಪಟ್ಟಣ ಪಂಚಾಯಿತಿ ನಿವೇಶನ ನೀಡುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಹೀಗಾಗಿ ಕಳೆದ 30 ವರ್ಷಗಳಿಂದ ಪಟ್ಟಣದಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಭಾಗ್ಯ ಇಲ್ಲದಂತಾಗಿದೆ. ಈ ಕುರಿತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗೆ ಪ್ರಜಾವಾಣಿ ಕರೆ ಮಾಡಿದರೂ ಅವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

- ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಪಟ್ಟಣದ ಗೋಂಧಳಿ ಗಲ್ಲಿಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರ
- ಕಬ್ಬೂರ ಪಟ್ಟಣದಲ್ಲಿಯ ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರದಲ್ಲಿನ ಅಡುಗೆ ಕೋಣೆ ಹಾಗೂ ದಾಸ್ತಾನು ಕೋಣೆ.
ಕಬ್ಬೂರಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ವಾಸಿಸುವ ಪ್ರದೇಶದಲ್ಲಿ ಸರ್ಕಾರಿ ಜಾಗವಿದ್ದರೂ ಅಂಗನವಾಡಿ ಕಟ್ಟಿಸಲು ಅಧಿಕಾರಿಗಳು ಜನಪ್ರತಿನಿಧಿಗಳು ಮನಸ್ಸು ಮಾಡಿಲ್ಲ
–ನಾಮದೇವ ಹಿರೇಕೋಡಿ, ಸಾಮಾಜಿಕ ಕಾರ್ಯಕರ್ತ
ಕಬ್ಬೂರಿನ ಏಳು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದಿರುವುದು ಗಮನಕ್ಕಿದೆ. ಈಗಾಗಲೇ ಒಂದು ಕಟ್ಟಡಕ್ಕೆ ಪಟ್ಟಣ ಪಂಚಾಯಿತಿ ನಿವೇಶನ ನೀಡಲಾಗಿದೆ
–ಸಂತೋಷ ಕಾಂಬಳೆ ಸಿಡಿಪಿಒ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.