ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಅಂಕಲಿ ಗ್ರಾಮದಲ್ಲಿ ಕಸದ ರಾಶಿಗೆ ಮುಕ್ತಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 2:38 IST
Last Updated 21 ಆಗಸ್ಟ್ 2025, 2:38 IST
ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಸಂಕೇಶ್ವರ-ಜೇವರ್ಗಿ ಹೆದ್ದಾರಿಯಲ್ಲಿ ಬಿದ್ದಿರುವ ಕಸದ ರಾಶಿಯನ್ನು ಅಂಕಲಿ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರು ತೆರವುಗೊಳಿಸುತ್ತಿರುವುದು.
ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಸಂಕೇಶ್ವರ-ಜೇವರ್ಗಿ ಹೆದ್ದಾರಿಯಲ್ಲಿ ಬಿದ್ದಿರುವ ಕಸದ ರಾಶಿಯನ್ನು ಅಂಕಲಿ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರು ತೆರವುಗೊಳಿಸುತ್ತಿರುವುದು.   

ಚಿಕ್ಕೋಡಿ: ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಸ್ವಚ್ಛತೆಯು ಮಾಯವಾಗಿದ್ದು, ಅವ್ಯವಸ್ಥೆಯು ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ "ಅಂಕಲಿ : ಕಾಣೆಯಾದ ಶುಚಿತ್ವ..!" ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಜಾವಾಣಿಯಲ್ಲಿ ಆ.20 ರಂದು ವಿಶೇಷ ವರದಿ ಪ್ರಕಟವಾಗಿತ್ತು. ವರದಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಂಕಲಿ ಗ್ರಾಮ ಪಂಚಾಯಿತಿಯು ಗ್ರಾಮದಲ್ಲಿ ಬುಧವಾರ ಸ್ವಚ್ಛತಾ ಕಾರ್ಯ ಕೈಗೊಂಡಿತು.

ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮದ ಪ್ರಮುಖ ರಸ್ತೆ ಹಾಗೂ ಹೊರವಲಯದ ಕೆಲವೊಂದು ಕಡೆಗೆ ಹೊಟೇಲ್, ಡಾಭಾ ತ್ಯಾಜ್ಯವನ್ನು ತಂದು ಹಾಕಿದ್ದರಿಂದ ದುರ್ನಾತ ಹಬ್ಬಿತ್ತು. ಪ್ರಜಾವಾಣಿ ಈ ಕುರಿತು ವರದಿ ಮಾಡಿದ್ದರಿಂದ ಚಿಕ್ಕೋಡಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್. ವಣ್ಣೂರ ಸೂಚನೆಯಂತೆ ಸ್ಥಳೀಯ ಪೌರ ಕಾರ್ಮಿಕರು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಕಸದ ರಾಶಿಗೆ ಮುಕ್ತಿ ಸಿಕ್ಕಂತಾಗಿದೆ.

ಮುಂಬರುವ ದಿನಗಳಲ್ಲಿ ಅಂಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಷ್ಟೇ ಅಲ್ಲದೇ, ಕಸದ ರಾಶಿಯನ್ನು ರಸ್ತೆಯ ಬದಿಯಲ್ಲಿ ಚೆಲ್ಲುವವರಿಗೆ ದಂಡ ವಿಧಿಸಿ ಶಿಸ್ತು ಕ್ರಮ ಜರುಗಿಸಲಾಗುವುದು. ಡಾಬಾ ಹಾಗೂ ಹೊಟೇಲ್ ಮಾಲೀಕರಿಗೆ ಕಸ ತುಂಬಲು ಬಕೆಟ್ ನೀಡಿ, ಅಲ್ಲಿಂದಲೇ ಕಸ ವಿಲೇವಾರಿ ವಾಹನದ ಮೂಲಕ ಕಸವನ್ನು ಸಂಗ್ರಹಿಸಲಾಗುವುದು ಎಂದು ಅಂಕಲಿ ಗ್ರಾಮ ಪಂಚಾಯಿತಿ ಪಿಡಿಒ ಸಂತೋಷ ಭಂಡಾರಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.