ADVERTISEMENT

ಅರಭಾವಿ: ಜಿಟಿಟಿಸಿ ಉದ್ಘಾಟನೆ ನ,24ರಂದು

₹ 28.02 ಕೋಟಿ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 7:56 IST
Last Updated 23 ನವೆಂಬರ್ 2020, 7:56 IST

ಬೆಳಗಾವಿ: ‘ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಅರಭಾವಿಯ ನಾಡ ಕಚೇರಿ ಬಳಿ ನಿರ್ಮಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ವನ್ನು ನ. 24ರಂದು ಬೆಳಿಗ್ಗೆ 11.30ಕ್ಕೆ ಉದ್ಘಾಟಿಸಲಾಗುವುದು’ ಎಂದು ಜಿಟಿಟಿಸಿ ವಲಯ ಅಧಿಕಾರಿ ಬಿ.ಜಿ. ಮೊಗೇರ ತಿಳಿಸಿದರು.

‘ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪಾಲ್ಗೊಳ್ಳುವರು. ಕ್ಷೇತ್ರದ ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅದ್ಯಕ್ಷತೆ ವಹಿಸುವರು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯದಲ್ಲೇ ಹೆಚ್ಚು:

ADVERTISEMENT

‘ಅರಭಾವಿ ಕೇಂದ್ರದೊಂದಿಗೆ ಜಿಲ್ಲೆಯು 3 (ಬೆಳಗಾವಿ, ಚಿಕ್ಕೋಡಿ ಸೇರಿ) ಕೇಂದ್ರಗಳನ್ನು ಹೊಂದಿದಂತಾಗಿದೆ. ಇದರೊಂದಿಗೆ ಅತಿ ಹೆಚ್ಚು ಜಿಟಿಸಿಸಿಗಳಿರುವ ಜಿಲ್ಲೆ ಎಂಬ ಗರಿಮೆ ಬೆಳಗಾವಿಯದ್ದಾಗಿದೆ. ಆ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಕೊಡುಗೆಯಾಗಿವೆ ಹಾಗೂ ಅವರು ಉದ್ಯೋಗ ಹೊಂದುವಂತೆ ಮಾಡುವಲ್ಲಿ ಇವುಗಳ ‍ಪಾತ್ರ ಮಹತ್ವದ್ದಾಗಿದೆ’ ಎಂದರು.

‘ಅರಭಾವಿ ಕೇಂದ್ರವನ್ನು 10 ಎಕರೆ ಜಾಗದಲ್ಲಿ ₹ 28.02 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಪೈಕಿ ಯಂತ್ರಗಳಿಗೆಂದೇ ₹ 10 ಕೋಟಿ ಆಗಿದೆ. ತರಬೇತಿ ಕೊಠಡಿ, ಡೈನಿಂಗ್ ಹಾಲ್, ಕಾರ್ಯಾಗಾರ ಕಟ್ಟಡ ಮತ್ತು ಬಾಲಕರ ಹಾಸ್ಟೆಲ್‌ ನಿರ್ಮಿಸಲಾಗಿದೆ. ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವಸತಿನಿಲಯ ಕಟ್ಟಡಗಳ ನಿರ್ಮಾಣ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.

ಎರಡು ಕೋರ್ಸ್‌ಗಳು:

‘ಅಲ್ಲಿ 2020–21ನೇ ಸಾಲಿನಲ್ಲಿ ಎಐಸಿಟಿ ಅನುಮೋದನೆ ಮೇರೆಗೆ, ಎರಡು ವರ್ಷಗಳ ದೀರ್ಘಾವಧಿಯ ಟೂಲ್ ಅಂಡ್ ಡೈ ಮೇಕಿಂಗ್ ಮತ್ತು ಮೆಕ್ಯಾಟ್ರಾನಿಕ್ಸ್‌ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ನಾಲ್ಕು ವರ್ಷಗಳ ಅವಧಿಯ (ಒಂದು ವರ್ಷ ಕೈಗಾರಿಕೆಗಳಲ್ಲಿ ತರಬೇತಿ) ಈ ಕೋರ್ಸ್‌ಗೆ ತಲಾ 60 ವಿದ್ಯಾರ್ಥಿಗಳಿಗೆ ಮೆರಿಟ್ ಹಾಗೂ ಮೀಸಲಾತಿ ಆಧರಿಸಿ ಪ್ರವೇಶ ನೀಡಲಾಗುವುದು. ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯವರು ಅರ್ಹರಾಗಿದ್ದಾರೆ. ಮುಖ್ಯಮಂತ್ರಿ ಕೌಶಲ ಕರ್ನಾಟಕ ಯೋಜನೆಯಲ್ಲಿ ಅಲ್ಪಾವಧಿ ತರಬೇತಿಗಳನ್ನೂ ನೀಡಲಾಗುವುದು’ ಎಂದು ವಿವರಿಸಿದರು.

‘ಎಂಜಿನಿಯರಿಂಗ್ ವಿದ್ಯಾರ್ಥಿಗಳು ಜಿಟಿಟಿಸಿಯಲ್ಲಿ ಇಂಟರ್ನ್‌ಶಿಪ್‌ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ವಿಟಿಯು ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ 15ರಿಂದ 20 ಕಂಪನಿಗಳು ಕ್ಯಾಂಪಸ್‌ ಸಂದರ್ಶನ ನಡೆಸುತ್ತಿವೆ. ಆಯ್ಕೆಯಾದ ಅಭ್ಯರ್ಥಿಗಳು ₹ 13ರಿಂದ ₹ 21ಸಾವಿರದವರೆಗೆ ವೇತನ ಗಳಿಸುತ್ತಿದ್ದಾರೆ. ಈ ಕೋರ್ಸ್‌ ಮುಗಿಸಿದವರಿಗೆ ಉದ್ಯೋಗದಾತರು ಆದ್ಯತೆ ಕೊಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಟೊಯೊಟಾ ಕಿರ್ಲೋಸ್ಕರ್‌ ಕಂಪನಿ ಸಹಯೋಗದಲ್ಲಿ ಆಟೊಮೊಟಿವ್ ಕ್ಷೇತ್ರಕ್ಕೆ ಸಂಬಂಧಿಸಿದ ಅಸೆಂಬ್ಲು ಫಿಟ್ಟರ್, ವಲ್ಟರ್‌ ಕೋರ್ಸ್‌ಗಳನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.