ADVERTISEMENT

ಚಿರತೆ ಸೆರೆ ಕಾರ್ಯಾಚರಣೆ: ತಡರಾತ್ರಿ ಬೆಳಗಾವಿಗೆ ಬಂದ ಅರ್ಜುನ, ಆಲಿ ಆನೆಗಳು

ಚಿರತೆ ಸೆರೆ ಕಾರ್ಯಾಚರಣೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 4:19 IST
Last Updated 24 ಆಗಸ್ಟ್ 2022, 4:19 IST
   

ಬೆಳಗಾವಿ: ಇಲ್ಲಿನ ಗಾಲ್ಫ್ ಮೈದಾನದಲ್ಲಿ ಅವಿತ ಚಿರತೆ ಸೆರೆ ಹಿಡಿಯಲು ಕರೆಸಲಾದ ಎರಡು ಆನೆಗಳು ಮಂಗಳವಾರ ತಡರಾತ್ರಿ 2.30ಕ್ಕ ಬೆಳಗಾವಿ ನಗರ ತಲುಪಿವೆ.

ಮಂಗಳವಾರ ಬೆಳಿಗ್ಗೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಶಿಬಿರದಿಂದ ಹೊರಟ ಅರ್ಜುನ (20) ಹಾಗೂ ಆಲಿ (14) ಎಂಬ ಆನೆಗಳು ನಗರ ತಲುಪುವುದು ತಡವಾಯಿತು. ಹೀಗಾಗಿ ಬೆಳಿಗ್ಗೆವರೆಗೆ ವಿಶ್ರಾಂತಿ ನೀಡಿ ನಂತರ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಚಿರತೆ ಓಡಾಡಿದ ಇಲ್ಲಿನ ಗಾಲ್ಫ್ ಮೈದಾನದ ಆವರಣದಲ್ಲೇ ಎರಡೂ ಆನೆಗಳನ್ನು ಕಟ್ಟಲಾಗಿದೆ. ಅವುಗಳೊಂದಿಗೆ ತಲಾ ಒಬ್ಬ ಮಾವುತ, ಕಾವಾಡಿಗ, ಒಬ್ಬ ಅರಿವಳಿಕೆ ತಜ್ಞ ಸೇರಿ 8 ಪರಿಣತರು ಬಂದಿದ್ದಾರೆ. ಇವರೊಂದಿಗೆ ಸ್ಥಳೀಯವಾಗಿ ಆರು ಅರಿವಳಿಕೆ ತಜ್ಞರನ್ನೂ ನಿಯೋಜಿಸಲಾಗಿದೆ. ಒಟ್ಟು 70 ಸಿಬ್ಬಂದಿ ಕಾರ್ಯಾಚರಣೆಗೆ ಅಣಿಯಾಗಿದ್ದು, ಇವರಲ್ಲಿ 10 ಜನ ಮಾತ್ರ ಆನೆಗಳ ಜತೆ ತೆರಳಲಿದ್ದಾರೆ.

ADVERTISEMENT

ಆ.5ರಿಂದ ನಗರದ ಜನವಸತಿ ಪ್ರದೇಶದಲ್ಲಿಯೇ ಠಾಕಾಣೆ ಹೂಡಿರುವ ಚಿರತೆ ಸೆರೆಗೆ, 20 ದಿನಗಳ ನಂತರ ಅರಣ್ಯಾಧಿಕಾರಿಗಳು ಆನೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಈ ಎರಡೂ ಆನೆಗಳು ಪುಂಡಾನೆಗಳನ್ನು ಸೆರೆಹಿಡಿಯುವಲ್ಲಿ ಅತ್ಯಂತ ನೈಪುಣ್ಯ ಹೊಂದಿವೆ. ಆದರೆ ಚಿರತೆ ಕಾರ್ಯಾಚರಣೆ ಆನೆಗಳಿಗೂ ಇದೇ ಮೊದಲ ಅನುಭವ ಎಂದು ಸಕ್ರೆಬೈಲ್ ಆನೆ ತರಬೇತಿ ಶಿಬಿರದ ಮೂಲಗಳು ತಿಳಿಸಿವೆ.

ಮೇಲಾಗಿ, ಇದೇ ಮೊದಲಬಾರಿಗೆ ಬೆಳಗಾವಿ ಜನ ಇಂಥ ಕಾರ್ಯಾಚರಣೆ ನೋಡಲಿದ್ದಾರೆ. ಕರೆಯದೇ ಬಂದ ಕಾಡಿನ ಅತಿಥಿಯನ್ನು ಸುರಕ್ಷಿತವಾಗಿ ಮರಳಿ ಕಾಡಿಗೆ ಕಳುಹಿಸುವ ಈ ಕಸರತ್ತುಗಳು ಜನರಲ್ಲಿ ಇನ್ನಿಲ್ಲದ ಕೌತುಕ ಮೂಡಿಸಿವೆ.

ಆನೆಗಳು ನಗರ ಬಂದು ತಲುಪಿದ ಸುದ್ದಿ ತಿಳಿದು ಅಪಾರ ಜನ ಅವುಗಳನ್ನು ನೋಡಲು, ಫೋಟೊ ಕ್ಲಿಕ್ಕಿಸಲು ಬಂದರು. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ದೂರದಲ್ಲೇ ಜನರಿಗೆ ತಡೆಯೊಡ್ಡಿದರು.

10 ಸೆಕೆಂಡ್ ಸಾಕು:
ಮನುಷ್ಯರು ಹೋಗಲಾಗದಂಥ ಅರಣ್ಯ ಸ್ಥಳಕ್ಕೆ ಆನೆಗಳು ಸುಲಭವಾಗಿ ಹೋಗಲಿವೆ. ಅವುಗಳ ಮೇಲೆ ಒಬ್ಬ ಮಾವುತ, ಅರಿವಳಿಕೆ ಶೂಟ್ ಮಾಡುವ ಒಬ್ಬ ಶಾರ್ಪ್ ಶೂಟರ್ ಸಿಬ್ಬಂದಿ ಇರುತ್ತಾರೆ.

ಚಿರತೆ 10ರಿಂದ 15 ಸೆಕೆಂಡ್ ಕಣ್ಣಿಗೆ ಬಿದ್ದರೂ ಸಾಕು ಅರಿವಳಿಕೆ ಚುಚ್ಚುಮದ್ದನ್ನು ಯಶಸ್ವಿಯಾಗಿ ಶೂಟ್ ಮಾಡಬಲ್ಲ ಎಂದು ಸಿಬ್ಬಂದಿ ನಾಗೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.