ADVERTISEMENT

ಪ್ರೋತ್ಸಾಹಧನ ₹ 12 ಸಾವಿರಕ್ಕೆ ಹೆಚ್ಚಿಸಲು ಒತ್ತಾಯ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 11:20 IST
Last Updated 21 ಸೆಪ್ಟೆಂಬರ್ 2020, 11:20 IST
ಪ್ರೋತ್ಸಾಹ ಧನಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ಸದಸ್ಯರು ಜಿಲ್ಲಾಧಿ ಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಿದರು
ಪ್ರೋತ್ಸಾಹ ಧನಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ಸದಸ್ಯರು ಜಿಲ್ಲಾಧಿ ಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಿದರು   

ಕಲಬುರ್ಗಿ: ಕೊರೊನಾ ವಾರಿಯರ್ಸ್ ಎಂದೇ ಹೆಸರಾದ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರು ಕಡಿಮೆ ಪ್ರೋತ್ಸಾಹ ಧನ ಪಡೆದು ಕೆಲಸ ಮಾಡುತ್ತಿದ್ದಾರೆ. ಕೂಡಲೇ ಗೌರವ ಧನವನ್ನು ₹ 12 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕಲಬುರ್ಗಿ, ಜೇವರ್ಗಿ, ಅಫಜಲಪುರ, ಶಹಾಬಾದ್, ಆಳಂದ, ಚಿಂಚೋಳಿ, ಸೇಡಂ, ಚಿಂಚೋಳಿ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ನೂರಾರು ಆಶಾ ಕಾರ್ಯಕರ್ತೆಯರು ಚುರುಗುಟ್ಟುವ ಬಿಸಿಲಿನಲ್ಲೂ ಕುಳಿತು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿ.ಜಿ.ದೇಸಾಯಿ ಮಾತನಾಡಿ, ‘ಕಾರ್ಯಕರ್ತೆಯರ ಚಟುವಟಿಕೆಗಳನನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ದಾಖಲಿಸಲು ಇರುವ ಅಸಂಖ್ಯಾತ ಲೋಪದೋಷಗಳನ್ನು ಸರಿಪಡಿಸುವ ಹೆಸರಿನಲ್ಲಿ ಅನುಸರಿಸಿದ ವಿಳಂಬ ನೀತಿಯಿಂದಾಗಿ 2018–19ರ ನಡುವೆ 15 ತಿಂಗಳುಗಳಲ್ಲಿ ಪ್ರತಿ ಕಾರ್ಯಕರ್ತೆಗೆ ಬರಬೇಕಾಗಿದ್ದ ಸಾವಿರಾರು ರೂಪಾಯಿ ಹಣ ಬರದೇ ನಷ್ಟವಾಯಿತು. ಅದನ್ನು ಕೊಡುವ ವ್ಯವಸ್ಥೆ ಇನ್ನೂ ಆಗಿಲ್ಲ. ಈಗಲೂ ತಿಂಗಳ ಕೆಲಸಕ್ಕೆ ತಕ್ಕಷ್ಟು ಹಣ ಅವರಿಗೆ ಸಿಗುತ್ತಿಲ್ಲ. ದಿನೇ ದಿನೇ ದುಡಿತ ಹೆಚ್ಚುತ್ತಿದೆಯೇ ಹೊರತು ದುಡಿದ ಹಣ ಮಾತ್ರ ಕೈಗೆ ಬರಲಿಲ್ಲ. ಈ ಅನ್ಯಾಯದಿಂದ ಕಾರ್ಯಕರ್ತೆಯರ ಕುಟುಂಬಗಳು ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸುವಂತಾಯಿತು. ₹ 12 ಸಾವಿರ ಪ್ರೋತ್ಸಾಹ ಧನ ವಾಸ್ತವಿಕವಾಗಿದ್ದು, ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗುವುದಿಲ್ಲವೆಂದೂ ಸಂಘವು ಪದೇ ಪದೇ ಪ್ರಸ್ತಾಪಿಸುತ್ತಾ ಬಂದಿದೆ’ ಎಂದರು.

ADVERTISEMENT

‘ರಾಜ್ಯದ ಎಲ್ಲ ಆಶಾ ಕಾರ್ಯಕರ್ತೆಯರು ಮುಷ್ಕರ ಸ್ಥಗಿತಗೊಳಿಸಿ 50 ದಿನ ಕಳೆದರೂ ಸರ್ಕಾರದ ಕಡೆಯಿಂದ ಯಾವ ಅಧಿಕೃತ ಘೋಷಣೆಯೂ ಬಂದಿಲ್ಲ. ಬೇಡಿಕೆಗಳನ್ನು ಈಡೇರಿಸುವುದಾಗಿ ವಚನವಿತ್ತರೂ ಏನನ್ನೂ ಘೋಷಣೆ ಮಾಡಿಲ್ಲ. ಇತ್ತೀಚೆಗೆ ಕಲಬುರ್ಗಿಗೆ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಸ್ವೀಕರಿಸಿದರೂ, ಯಾವ ನಿರ್ದಿಷ್ಟ ಭರವಸೆಯನ್ನು ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಮಿಕ ಮುಖಂಡ ಎಸ್‌.ಎಂ.ಶರ್ಮಾ ಮಾತನಾಡಿ, ‘ಮೇಲಿಂದ ಮೇಲೆ ಎಲ್ಲ ಆರೋಗ್ಯ ಎಲ್ಲ ಆರೋಗ್ಯ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ಮಾಡಿಸಬೇಕು. ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಜರ್‌ಗಳನ್ನು ಸಮರ್ಪಕವಾಗಿ ನೀಡಬೇಕು. ಈಗಾಗಲೇ ಘೋಷಿಸಿರುವ ₹ 3 ಸಾವಿರ ಕೋವಿಡ್ ವಿಶೇಷ ಪ್ರೋತ್ಸಾಹಧನವನ್ನು ಇನ್ನೂ ತಲುಪದಿರುವ ಆಶಾಗಳಿಗೆ ಪಾವತಿಸುವಂಯತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಿವಲಿಂಗಮ್ಮಾ ಹರಳಯ್ಯ, ಎಂ.ಜಿ.ರಾಘವೇಂದ್ರ, ಶರಣು ಹೇರೂರ, ಮಲ್ಲಿನಾಥ ಸಿಂಘೆ, ಬಾಗಣ್ಣ ಬುಕ್ಕಾ, ಜಯಶ್ರೀ ದೊಡ್ಡಮನಿ, ಸಾವಿತ್ರಿ ಬಟಗೇರಾ, ನಾಗಮ್ಮ ಕೊಲ್ಲುರ, ವಿಜಯಲಕ್ಷ್ಮಿ ನಂದಿಕೂರ, ರತ್ನಾ ಸರಡಗಿ, ಯಾಸ್ಮಿನ್ ಅಂಕಲಗಾ, ಕವಿತಾ ಮಣ್ಣೂರ, ತಾಯಮ್ಮಾ ನರಿಬೋಳ, ಅಣ್ಣೆಮ್ಮಾ ಕೂಡಿ, ಸುಧಾ ವಡಗೇರಾ, ಗಂಗೂಬಾಯಿ ಜೇರಟಗಿ, ಹೀರಾಮಣಿ ಕೂರಗುಂಟಾ, ನಾಗಮ್ಮಾ ಮದನಾ, ಮಹಾದೇವಿ ಕೊಲಕುಂದಾ, ರುಕ್ಮಿಣಿ, ರಾಣಿ ತಡಕಲ್, ಮಮತಾಜ ಮಳಖೇಡ, ಕಮಲಾ ಕೆ.ಆರ್. ಪಲ್ಲಿ, ಮಂಗಮ್ಮಾ ಇಟಕಲ್, ಶಿವಲೀಲಾ ಜಿಡಗಾ, ಮಂಜುಳಾ ಚಾಮನೂರ, ರೇಣುಕಾ ಎರಿ, ಜ್ಯೋತಿ ಸೇಡಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.