ADVERTISEMENT

ಪರಿಶಿಷ್ಟರಿಗೆ ಉದ್ಯೋಗ ಕಲ್ಪಿಸಲು ‘ಆಶಾದೀಪ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 14:55 IST
Last Updated 17 ಫೆಬ್ರುವರಿ 2020, 14:55 IST

ಬೆಳಗಾವಿ: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವಕ, ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ‘ಆಶಾದೀಪ’ ಯೋಜನೆ ಜಾರಿಗೊಳಿಸಲಾಗಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಮತ್ತು ಅರ್ಹರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೂಚಿಸಿದರು.

ಯೋಜನೆಯ ಅನುಷ್ಠಾನ ಕುರಿತು ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚು ಪ್ರಚಾರ ಮಾಡಿ, ಜನರಿಗೆ ಯೋಜನೆಯ ಮಾಹಿತಿ ತಲುಪಿಸಬೇಕು’ ಎಂದರು.

ADVERTISEMENT

ಕಾರ್ಮಿಕ ಕಲ್ಯಾಣ ಇಲಾಖೆ ಉಪ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಮಾತನಾಡಿ, ‘ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭ್ಯರ್ಥಿಗಳಿಗೆ ಖಾಸಗಿ ವಲಯದಲ್ಲಿ ಉದ್ಯೋಗಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದೊರಕಿಸಿಕೊಡಲು ಮತ್ತು ಉದ್ಯೋಗದಾತರನ್ನು ಉತ್ತೇಜಿಸಲು ಆಶಾದೀಪ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಆಯಾ ಸಂಸ್ಥೆ ಅಥವಾ ಉದ್ದಿಮೆಯ ಮಾಲೀಕರು ತನ್ನ ನೌಕರರಿಗೆ ಪಾವತಿಸುವ ಇ.ಎಸ್.ಐ. ಮತ್ತು ಪಿ.ಎಫ್. ವಂತಿಕೆಯನ್ನು ಕಾರ್ಮಿಕ ಇಲಾಖೆಯಿಂದ ಮರುಪಾವತಿಸಲಾಗುತ್ತದೆ. ಅಪ್ರೆಂಟಿಸ್‌ ತರಬೇತಿ ಪಡೆಯುವ ಅಭ್ಯರ್ಥಿಗಳ ಶಿಷ್ಯವೇತನ ಮರುಪಾವತಿ, ಅಪ್ರೆಂಟಿಸ್‌ ನಂತರ ಕಾಯಂ ಮಾಡಿದಲ್ಲಿ ವೇತನವನ್ನು ಮರುಪಾವತಿಸುವುದು ಸೇರಿದಂತೆ ವಿವಿಧ ಬಗೆಯ ಸೌಲಭ್ಯಗಳನ್ನು ಯೋಜನೆ ಹೊಂದಿದೆ’ ಎಂದರು.

ಸಹಾಯಕ ಕಾರ್ಮಿಕ ಆಯುಕ್ತ ನಾಗೇಶ ಡಿ.ಜಿ., ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಜೋಗುರ, ಕಾರ್ಮಿಕ ಅಧಿಕಾರಿ ತರನ್ನುಮ ಎ.ಬಿ., ಕಾರ್ಮಿಕರು ಹಾಗೂ ಮಾಲೀಕರ ಸಂಘದ ಪ್ರತಿನಿಧಿಗಳಾದ ಎನ್.ಆರ್. ಲಾತೂರ, ಕೃಷ್ಣ ಭಟ್ಟ, ವೈಭವ ವರ್ಣೇಕರ, ವೈಶಾಲಿ, ಶೋಭಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.