ADVERTISEMENT

ಅಂತರರಾಜ್ಯ ಸಂಬಂಧಕ್ಕೆ ಧಕ್ಕೆ ತರುವ ನಡೆ:

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 11:38 IST
Last Updated 17 ಜನವರಿ 2020, 11:38 IST
ಅಶೋಕ ಚಂದರಗಿ
ಅಶೋಕ ಚಂದರಗಿ   

ಬೆಳಗಾವಿ: ‘‘ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್) ಆಚರಿಸುವ ‘ಹುತಾತ್ಮರ ದಿನಾಚರಣೆ’ಯಲ್ಲಿ ಭಾಗವಹಿಸಲು ಕಳ್ಳನಂತೆ ಬೆಳಗಾವಿ ಪ್ರವೇಶಿಸಿದ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರ ನಡೆಯು ಅತ್ಯಂತ ಆಕ್ಷೇಪಾರ್ಹವಾಗಿದ್ದು, ಅಂತರರಾಜ್ಯ ಸಂಬಂಧಕ್ಕೆ ಧಕ್ಕೆ ತರುವಂಥದ್ದಾಗಿದೆ’’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಟೀಕಿಸಿದ್ದಾರೆ.

‘ಒಂದು ರಾಜ್ಯದ ಸಚಿವರು ಮತ್ತೊಂದು ರಾಜ್ಯ ಪ್ರವೇಶಿಸುವ ಮುನ್ನ ಅಲ್ಲಿಯ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಮತ್ತೊಂದು ರಾಜ್ಯದಲ್ಲಿ ತಾವು ಭಾಗವಹಿಸುವ ಕಾರ್ಯಕ್ರಮದ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡಿಯೇ ಬರಬೇಕಾಗುತ್ತದೆ. ಆದರೆ, ಶುಕ್ರವಾರ ಮಹಾರಾಷ್ಟ್ರದ ಸಚಿವರು ಬೆಳಗಾವಿ ಜಿಲ್ಲಾಡಳಿತ ಅಥವಾ ಜಿಲ್ಲಾ ಪೋಲೀಸರಿಗೆ ಮಾಹಿತಿ ನೀಡದೇ ಬಂದಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪೋಲೀಸರು ಅವರನ್ನು ವಶಕ್ಕೆ ಪಡೆದು ಮರಳಿ ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಿ ಬಿಡುಗಡೆ ಮಾಡಿರುವ ಕ್ರಮವು ಅತ್ಯಂತ ಸೂಕ್ತವಾಗಿದೆ’ ಎಂದು ಹೇಳಿದ್ದಾರೆ.

‘ಮಹಾರಾಷ್ಟ್ರದ ಈ ಸಚಿವರು ಬೆಳಗಾವಿಗೆ ಬರುವ ಮುನ್ನ ಯಾವುದೇ ಸೂಚನೆ ಕೊಟ್ಟಿರಲಿಲ್ಲ. ಖಾಸಗಿ ವಾಹನದಲ್ಲಿ ಮಾರುವೇಷದಲ್ಲಿ ಬೆಳಗಾವಿ ಪ್ರವೇಶಿಸಿರುವುದು ಮಹಾರಾಷ್ಟ್ರದ ಶಿವಸೇನೆ ನೇತೃತ್ವದ ಸರ್ಕಾರದ ಮುಂದಿನ ಕಾರ್ಯಸೂಚಿಯನ್ನು ತೋರಿಸುತ್ತದೆ. ಕರ್ನಾಟಕ ಸರ್ಕಾರ ಈ ಬೆಳವಣಿಗೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಚಿವರನ್ನು ಬೆಳಗಾವಿಗೆ ಆಹ್ವಾನಿಸಿದ ಸಂಘಟಕರು ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿರುವುದು ಇದು ಮೊದಲ ಬಾರಿಯೇನಲ್ಲ. ನಾಲ್ಕೈದು ದಶಕಗಳಿಂದ ಇಂಥ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಮೊದಲು ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.