ADVERTISEMENT

ಬೆಳಗಾವಿ | ಪ್ರವಾಹ ನಿಯಂತ್ರಣಕ್ಕೆ ಕ್ರಮ ವಹಿಸಿ: ಸಿ.ಎಂಗೆ ಪತ್ರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 7:45 IST
Last Updated 24 ಆಗಸ್ಟ್ 2025, 7:45 IST
ಅಶೋಕ ಚಂದರಗಿ
ಅಶೋಕ ಚಂದರಗಿ   

ಬೆಳಗಾವಿ: ‘ಬೆಳಗಾವಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಲಪ್ರಭಾ, ಘಟಪ್ರಭಾ ನದಿಪಾತ್ರದಲ್ಲಿ ಆಗಿರುವ 777 ಎಕರೆ ಒತ್ತುವರಿ ತೆರವುಗೊಳಿಸಿ, ಪ್ರವಾಹ ನಿಯಂತ್ರಣಕ್ಕೆ ಕ್ರಮ ವಹಿಸಬೇಕು’ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ. 

ಈ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಸಚಿವ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತೆ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗೆ ಶನಿವಾರ ಅವರು ಪತ್ರ ಬರೆದಿದ್ದಾರೆ.

‘ಪ್ರತಿವರ್ಷ ಮಲಪ್ರಭಾ, ಘಟಪ್ರಭಾ ನದಿಗಳಲ್ಲಿ ಪ್ರವಾಹ ಉಂಟಾಗಿ, ನೂರಾರು ಹಳ್ಳಿಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದಕ್ಕೆ ನದಿಪಾತ್ರದ ಒತ್ತುವರಿಯೂ ಮುಖ್ಯ ಕಾರಣ. ಇದನ್ನು ತೆರವುಗೊಳಿಸುವಂತೆ ಪ್ರಾದೇಶಿಕ ಆಯುಕ್ತರಿಗೆ 3 ವರ್ಷಗಳ ಹಿಂದೆಯೇ ವರದಿ ಸಲ್ಲಿಕೆಯಾಗಿದ್ದರೂ ಕ್ರಮವಾಗಿಲ್ಲ. ಒತ್ತುವರಿ ತಡೆದು ಜಾಗ ಸಂರಕ್ಷಿಸಲು ಸರ್ಕಾರ ನೀಡಿದ್ದ ಅನುದಾನವೂ ಬಳಕೆಯಾಗುತ್ತಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಮಲಪ್ರಭಾ, ಘಟಪ್ರಭಾ ನದಿಪಾತ್ರದ ಒತ್ತುವರಿ ತೆರವಿಗಾಗಿ ಹಿರಿಯ ಅಧಿಕಾರಿಗಳು ಯಾರ ಪ್ರಭಾವಕ್ಕೂ ಮಣಿಯದಂತೆ ಸರ್ಕಾರ ಸೂಚನೆ ಕೊಡಬೇಕು. ಈ ಮೂಲಕ ಪರಿಣಾಮಕಾರಿಯಾಗಿ ಪ್ರವಾಹ ಪರಿಸ್ಥಿತಿ ನಿಯಂತ್ರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಮಲಪ್ರಭಾ, ಘಟಪ್ರಭಾ ನದಿಪಾತ್ರದಲ್ಲಿ 777 ಎಕರೆ ಒತ್ತುವರಿಯಾದ ಕುರಿತು ‘ಪ್ರಜಾವಾಣಿ’ ಆ.23ರ ಸಂಚಿಕೆಯಲ್ಲಿ ‘ನದಿಪಾತ್ರದಲ್ಲಿ 777 ಎಕರೆ ಒತ್ತುವರಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.