
ರಾಮದುರ್ಗ: ‘ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಅವರೊಂದಿಗೆ ಮಾನವೀಯತೆಯಿಂದ ಮಾತನಾಡಿದರೆ ಸಾಕು ರೋಗಿಯ ಅರ್ಧ ರೋಗ ಗುಣಮುಖವಾಗುತ್ತದೆ. ವೈದ್ಯರು ರೋಗಿಯೊಂದಿಗೆ ಸೌಜನ್ಯದಿಂದ ವರ್ತಿಸಬೇಕು’ ಎಂದು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ತಾಲ್ಲೂಕು ವೈದ್ಯಾಧಿಕಾರಿಗೆ ತಾಕೀತು ಮಾಡಿದರು.
ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಜರುಗಿದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ‘ಆಸ್ಪತ್ರೆಗಳಿಗೆ ಗ್ರಾಮೀಣ ಪ್ರದೇಶದಿಂದ ಹೆಚ್ಚಾಗಿ ಜನ ಬರುತ್ತಾರೆ. ರೋಗಿಗಳು ಬಂದರೂ ವೈದ್ಯರು ಆಸ್ಪತ್ರೆಗೆ ಬರುವುದಿಲ್ಲ ಎಂಬ ಆರೋಪ ಇದೆ. ವೈದ್ಯರು ಮೊದಲಿಗೆ ಸಮಯಕ್ಕೆ ಮೊದಲಿಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.
‘ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸವನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ. ಮೊದಲಿದ್ದ ತೊಂದರೆ ಈಗಿಲ್ಲ. ಆಸ್ಪತ್ರೆಯಲ್ಲಿನ ಶೌಚಾಲಯಗಳನ್ನು ನವೀಕರಿಸಿ ರೋಗಿಗಳಿಗೆ ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ನವೀನ ನಿಜಗುಲಿ ಸಭೆಗೆ ತಿಳಿಸಿದರು.
‘ಕಟ್ಟಡ ಕಾರ್ಮಿಕರ ಕಾರ್ಡ್ ವಿತರಣೆ ಮತ್ತು ಸೌಲಭ್ಯಗಳ ವಿತರಣೆ ಹಾಗೂ ಪಟ್ಟಣದ ಕೆಲ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಕಾರ್ಮಿಕರ ವೇತನ, ಸ್ವಚ್ಛತೆ ಮುಂತಾದವುಗಳ ನೆಪದಲ್ಲಿ ಹಣ ಕೇಳಿ ಕಿರುಕುಳ ನೀಡುತ್ತಿರುವ ದೂರು ಮೊದಲಿನಿಂದಲೂ ಕೇಳಿ ಬರುತ್ತಿದೆ. ಸುಧಾರಿಸಕೊಳ್ಳದಿದ್ದರೆ ಸೂಕ್ತ ಕ್ರಮಕೈಗೊಳ್ಳುವುದು’ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.
‘ತಾಲ್ಲೂಕಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ಅನುಷ್ಠಾನಗೊಂಡಿರುವ ಜಲ ಜೀವನ್ ಮಿಷನ್ ಯೋಜನೆಯಡಿ ಅಳವಡಿಸಿರುವ ನಲ್ಲಿಗಳು ಕಳಪೆ ಗುಣಮಟ್ಟದ್ದಾಗಿವೆ. ಹೀಗಾದರೆ ಸರ್ಕಾರದ ಅನುದಾನ ಸದ್ಬಳಕೆಯಾಗುವುದಿಲ್ಲ. ತಾಲ್ಲೂಕಿನಲ್ಲಿ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು’ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಕುನ್ನಾಳ, ಡಿ.ಹೊಸೂರ ಮತ್ತು ಶಿವರಾಜಪುರ ಗ್ರಾಮಗಳಿಗೆ ನಿರಂತರ ಜ್ಯೋತಿ ಯೋಜನೆಯನ್ನು ಅಳವಡಿಸಿಕೊಳ್ಳುವ ಮೂಲಕ ಆ ಭಾಗದ ಜನರಿಗೆ ಸೌಲಭ್ಯ ದೊರಕಿಸಿಕೊಡಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ರಾಮದುರ್ಗ ತಾಲ್ಲೂಕಿಗೆ ಹೊಸದಾಗಿ ಮಂಜೂರಾಗಿರುವ ವಿದ್ಯುತ್ ವಿತರಣಾ ಕೇಂದ್ರಗಳು ಶೀಘ್ರವಾಗಿ ಕೆಲಸ ಪ್ರಾರಂಭಿಸಲು ಶ್ರಮಿಸಬೇಕು ಎಂದು ಸೂಚನೆ ನೀಡಿದರು.
ರೈತರು ಹೆಚ್ಚು ಇಳುವರಿ ಪಡೆಯಲು ಯೂರಿಯಾ ಗೊಬ್ಬರದ ಬಳಕೆ ಹೆಚ್ಚಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಯೂರಿಯಾ ಬಳಕೆ ಕಡಿಮೆ ಮಾಡಲು ಕೃಷಿ ಅಧಿಕಾರಿಗಳು ಮುಂದಾಗುವಂತೆ ನಿರ್ದೇಶಿಸಿದರು.
ತಾಲ್ಲೂಕಿನ ಜನರ ಮಹತ್ವಾಕಾಂಕ್ಷೆಯ ನೀರಾವರಿ ಯೋಜನೆಗಳ ಭೂಸ್ವಾಧೀನ ಕಾರ್ಯಕ್ಕೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿ ನಿಖರವಾದ ಅಂಕಿ– ಸಂಖ್ಯೆ ನೀಡಿದರೆ ಭೂಮಾಲೀಕರಿಗೆ ಪರಿಹಾರ ನೀಡಲ ಸಾಧ್ಯವಾಗುತ್ತದೆ. ನೀರಾವರಿ ನಿಗಮದ ಅಧಿಕಾರಿ ಕಾರ್ಯೋನ್ಮಖರಾಗಲು ಬಿಸಿ ಮುಟ್ಟಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಬಿ. ರಂಗನಗೌಡ್ರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.