ADVERTISEMENT

ಪ್ರವಾಸಿಗರನ್ನು ಆಕರ್ಷಿಸುವ ಅಸೋಗಾ

ಮಲಪ್ರಭಾ ನದಿ ತೀರದಲ್ಲೊಂದು ಪಿಕ್‌ನಿಕ್‌ ಸ್ಪಾಟ್

ಪ್ರಸನ್ನ ಕುಲಕರ್ಣಿ
Published 18 ಫೆಬ್ರುವರಿ 2021, 6:43 IST
Last Updated 18 ಫೆಬ್ರುವರಿ 2021, 6:43 IST
ಅಸೋಗಾದಲ್ಲಿರುವ ರಾಮಲಿಂಗೇಶ್ವರ ದೇವಾಲಯದ ಹೊರನೋಟ (ಸಂಗ್ರಹ ಚಿತ್ರ)
ಅಸೋಗಾದಲ್ಲಿರುವ ರಾಮಲಿಂಗೇಶ್ವರ ದೇವಾಲಯದ ಹೊರನೋಟ (ಸಂಗ್ರಹ ಚಿತ್ರ)   

ಖಾನಾಪುರ (ಬೆಳಗಾವಿ ಜಿಲ್ಲೆ): ಪಶ್ಚಿಮ ಘಟ್ಟಗಳ ಸಾಲಿನ ಸಹ್ಯಾದ್ರಿ ಬೆಟ್ಟಗುಡ್ಡಗಳಿಂದ ಸುತ್ತುವರಿದಿರುವ ಮತ್ತು ನಿಸರ್ಗದತ್ತ ಅರಣ್ಯ ಪ್ರದೇಶದ ಸೌಂದರ್ಯ ಹೊಂದಿರುವ ಅಸೋಗಾ ಈ ಭಾಗದ ಪ್ರಮುಖ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.

ಅಸೋಗಾ ಮಲಪ್ರಭಾ ನದಿತೀರದಲ್ಲಿರುವ ಪುಟ್ಟ ಗ್ರಾಮ. ಗ್ರಾಮದ ಉತ್ತರ ದಿಕ್ಕಿನಲ್ಲಿ ಅರ್ಧ ಕಿ.ಮೀ. ದೂರದಲ್ಲಿ ನದಿ ಹರಿಯುತ್ತದೆ. ಈ ನದಿ ತೀರದಲ್ಲಿ ಪುರಾತನ ಕಾಲದ ರಾಮಲಿಂಗೇಶ್ವರ ದೇವಾಲಯವಿದೆ. ಸ್ಥಳೀಯರು ಹೇಳುವ ಪ್ರಕಾರ, ಈ ದೇವಸ್ಥಾನ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ರಾಮಾಯಣದ ಕಾಲದಲ್ಲಿ ಸೀತೆಯನ್ನು ಹುಡುಕುತ್ತಾ ಸಂಚರಿಸುತ್ತಿದ್ದ ರಾಮ ಮಲಪ್ರಭಾ ತೀರದಲ್ಲಿ ಕೆಲ ಕಾಲ ತಂಗಿದ್ದ. ಆಗ ರಾಮ ನದಿ ತೀರದಲ್ಲಿ ಈಶ್ವರಲಿಂಗ ಪ್ರತಿಷ್ಠಾಪಿಸಿ ಪೂಜಿಸಿದ್ದ ಎನ್ನುವುದು ಜನರ ನಂಬಿಕೆಯಾಗಿದೆ ಹಾಗೂ ಮಾತಾಗಿದೆ. ಅಂದಿನಿಂದ ಈ ಭಾಗದಲ್ಲಿ ರಾಮಲಿಂಗೇಶ್ವರ ದೇವಸ್ಥಾನ ನಿರ್ಮಾಣಗೊಂಡಿದೆ.

ಶಿವರಾತ್ರಿ ಜೋರು:

ADVERTISEMENT

‘ಈ ರಾಮಲಿಂಗೇಶ್ವರ ದೈವ ಕೃಪೆ ಅರಸಿ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ’ ಎಂಬ ಪ್ರತೀತಿ ಇದೆ. ಪ್ರತಿ ವರ್ಷ ಸಂಕ್ರಮಣ, ಮಹಾಶಿವರಾತ್ರಿ ದಿನದಂದು ಈ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಆಗ ರಾಮಲಿಂಗೇಶ್ವರನ ಸಾವಿರಾರು ಭಕ್ತರು ಸೇರುವ ಕಾರಣ ದೊಡ್ಡ ಪ್ರಮಾಣದ ಜಾತ್ರೆ ನಡೆಯುತ್ತದೆ.

ನದಿತೀರದಲ್ಲಿ ಪ್ರಕೃತಿ ನಿರ್ಮಿತ ಸಾಮಾನ್ಯ ಗಾತ್ರದ ಬಂಡೆಗಲ್ಲುಗಳ ಮಧ್ಯದಲ್ಲಿ ನದಿಯ ನೀರು ಮಂಜುಳ ನಿನಾದದಿಂದ ಹರಿಯುತ್ತಿರುವ ದೃಶ್ಯ ಈ ತಾಣದ ಪ್ರಮುಖ ಆಕರ್ಷಣೆ. ಈ ಕಾರಣಕ್ಕಾಗಿಯೇ ನದಿಯ ಮಧ್ಯೆ ಇರುವ ಬಂಡೆಗಲ್ಲುಗಳ ಮೇಲೆ ಕುಳಿತು ಧುಮ್ಮಿಕ್ಕಿ ಹರಿಯುವ ನದಿಯ ಅಂದವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರೇ ಹೆಚ್ಚು.

ಹಾಡಿನ ಚಿತ್ರೀಕರಣ:

ಐದು ದಶಕಗಳ ಹಿಂದೆ ಹಿಂದಿ ಚಲನಚಿತ್ರ ನಿರ್ದೇಶಕ ಹೃಷಿಕೇಶ್‌ ಮುಖರ್ಜಿ ನಿರ್ದೇಶನದ ಮತ್ತು ಬಾಲಿವುಡ್ ನಟ ಅಮಿತಾಬ್‌ ಬಚ್ಚನ್-ಜಯಾ ಬಾಧುರಿ ಅಭಿನಯದ ‘ಅಭಿಮಾನ್’ ಎಂಬ ಹಿಂದಿ ಚಲನಚಿತ್ರ ಈ ನದಿತೀರದಲ್ಲಿ ಚಿತ್ರೀಕರಣಗೊಂಡಿದೆ. ಅಭಿಮಾನ್ ಚಿತ್ರದಲ್ಲಿರುವ ‘ನದಿಯಾ ಕಿನಾರೆ’ ಎಂಬ ಯುಗಳಗೀತೆಯಲ್ಲಿ ಮಲಪ್ರಭಾ ನದಿಯ ಸೊಬಗನ್ನು ಚಿತ್ರೀಕರಿಸಲಾಗಿದೆ.

ಅಸೋಗಾ ಖಾನಾಪುರದಿಂದ ಪಶ್ಚಿಮ ದಿಕ್ಕಿನಲ್ಲಿ 4 ಕಿ.ಮೀ. ದೂರದಲ್ಲಿದೆ. ಉತ್ತಮ ರಸ್ತೆ ಸಂಪರ್ಕ ಇದೆ. ಆದರೆ, ಬಸ್ ಸೌಲಭ್ಯವಿಲ್ಲ.
ಊಟ-ಉಪಾಹಾರದ ವ್ಯವಸ್ಥೆ ಇಲ್ಲ. ಖಾನಾಪುರದಿಂದ ಹೋಗಿಬರಲು ಖಾಸಗಿ ವಾಹನಗಳು ಸಿಗುತ್ತವೆ.

ಮುಜರಾಯಿ ಇಲಾಖೆಯ ಅಧೀನದಲ್ಲಿರುವ ರಾಮಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಅರ್ಚನೆ ಮಾಡಿಸಬಹುದು. ಭಕ್ತರಿಗೆ, ಪ್ರಕೃತಿಯ ಮಡಿಲಲ್ಲಿ ಕೆಲ ಸಮಯ ಕಳೆಯಲು ಬಯಸುವವರಿಗೆ, ಪರಿಸರಪ್ರಿಯರಿಗೆ, ಪ್ರವಾಸಿಗರಿಗೆ, ಚಾರಣಿಗರಿಗೆ, ಮಕ್ಕಳಿಗೆ ಮುದ ನೀಡುವ ತಾಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.