ADVERTISEMENT

ಮುಸ್ಲಿಂ ಮಹಿಳೆ ಜೊತೆಗಿದ್ದ ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣ: ಮತ್ತಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 7:59 IST
Last Updated 19 ಅಕ್ಟೋಬರ್ 2021, 7:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಮುಸ್ಲಿಂ ಮಹಿಳೆ ಜೊತೆ ಓಡಾಡುತ್ತಿದ್ದ ಕಾರಣಕ್ಕೆ ಹಿಂದೂ ಯುವಕನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಾಳಮಾರುತಿ ಠಾಣೆ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಮೂರಕ್ಕೇರಿದೆ.

ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದ ಮಹಿಳೆ ನಗರದ ಮಾಳಮಾರುತಿ ಠಾಣೆಗೆ ಅ.14ರಂದು ದೂರು ನೀಡಿದ್ದರು. 25 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿ ಆಟೊ ಚಾಲಕ ದಾವತ್‌ ಕತೀಬ್‌ ಎನ್ನುವವರನ್ನು ಭಾನುವಾರ ಬಂಧಿಸಲಾಗಿತ್ತು. ಅಯೂಬ್ ಮತ್ತು ಯೂಸುಫ್‌ ಪಠಾಣ ಎನ್ನುವವರನ್ನು ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಉಳಿದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ರಾಯಬಾಗದ ಚಿಂಚಲಿಯ ಪರಿಚಯಸ್ಥ ಯುವಕನಿಂದ ಸಾಲ ಪಡೆಯುವ ಉದ್ದೇಶದಿಂದ ನಗರಕ್ಕೆ ಬಂದಿದ್ದೆ. ಉದ್ಯಾನದಲ್ಲಿ ಕುಳಿತು ಮಾತನಾಡುವ ಉದ್ದೇಶದಿಂದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಆಟೊರಿಕ್ಷಾ ಹತ್ತಿದೆವು. ಚಾಲಕಅಮನ್‌ನಗರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡ ಹೋದ. ಮುಸ್ಲಿಂ ಆಗಿ ಹಿಂದೂ ಯುವಕನೊಂದಿಗೆ ಓಡಾಡುತ್ತೀಯಾ ಎಂದು ನಿಂದಿಸಿದ. ದಾರಿ ಮಧ್ಯದಲ್ಲಿ ಇನ್ನೂ ನಾಲ್ವರು ರಿಕ್ಷಾ ಹತ್ತಿದರು. ಆ ನಂತರ 10ರಿಂದ 15 ಮಂದಿ ಬೈಕ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಬಂದರು. ಎಲ್ಲರೂ ಸೇರಿ ಕಬ್ಬಿಣದ ಸಲಾಕೆ ಹಾಗೂ ಕಟ್ಟಿಗೆಯಿಂದ ಹೊಡೆದು ಕೊಲ್ಲಲು ಪ್ರಯತ್ನಿಸಿದರು. ಯುವಕನ ಮೊಬೈಲ್‌ ಫೋನ್‌, ₹ 50 ಸಾವಿರ, ಆಧಾರ್‌ ಮತ್ತು ಎಟಿಎಂ ಕಾರ್ಡ್‌ಗಳನ್ನು ಕಿತ್ತುಕೊಂಡರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು.

ADVERTISEMENT

ಆರೋಪಿಗಳಲ್ಲಿ ಬಹುತೇಕರು ಆಟೊರಿಕ್ಷಾ ಚಾಲಕರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.