ADVERTISEMENT

ಮೂರ್ತಿಕಾರನಿಗೆ ಪೊಲೀಸರಿಂದ ಥಳಿತ: ಕರವೇ ಆರೋಪ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 8:18 IST
Last Updated 1 ನವೆಂಬರ್ 2020, 8:18 IST

ಬೆಳಗಾವಿ: ‘ತಾಲ್ಲೂಕಿನ ಕಾಕತಿಯ ಮೂರ್ತಿಕಾರ ಮಹೇಶ ಮಾಸೆಕರ ಅವರಿಗೆ ಪೊಲೀಸ್ ಅಧಿಕಾರಿಗಳು ಥಳಿಸಿದ್ದಾರೆ, ಬೂಟಿನಿಂದ ಒದ್ದು ಅವಮಾನಿಸಿದ್ದಾರೆ ಮತ್ತು ನಿಂದಿಸಿದ್ದಾರೆ. ಇದರಿಂದಾಗಿ ಆ ವ್ಯಕ್ತಿ ಬಹಳ ಅಂಜಿದ್ದಾರೆ’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗೇನಟ್ಟಿ ದೂರಿದರು.

‘ಪೀರನವಾಡಿಯಲ್ಲಿ ನಾವು ಈಚೆಗೆ ಪ್ರತಿಷ್ಠಾಪಿಸಿದ್ದ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಅವರು ಮಾಡಿಕೊಟ್ಟಿದ್ದರು. ಶಾಹೂನಗರದಲ್ಲಿ ನಮ್ಮ ಸಂಘಟನೆಯವರು ಪ್ರತಿಮೆ ಬಗ್ಗೆ ವಿಚಾರಿಸಲು ಹೋಗಿದ್ದರು. ಹೀಗಾಗಿ, ಮೂರ್ತಿಕಾರನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಕಾಕತಿ ಠಾಣೆಯಲ್ಲಿಟ್ಟುಕೊಂಡು ಅಪಮಾನಿಸಿದ್ದಾರೆ’ ಎಂದು ಭಾನುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಮೂರ್ತಿಕಾರ ತನ್ನ ಹೊಟ್ಟೆಪಾಡಿಗಾಗಿ ಆ ಕೆಲಸ ಮಾಡುತ್ತಿದ್ದಾರೆ. ಅದು ಥಳಿಸುವಂತಹ ತಪ್ಪೇ? ನಮ್ಮ ಸಂಘಟನೆಯ ಶಾಹೂನಗರ ಘಟಕದ ಅಧ್ಯಕ್ಷ ಸಂಪತ್‌ಕುಮಾರ್‌ ಹಾಗೂ ಉಪಾಧ್ಯಕ್ಷ ಶಿವು ರಾಠೋಡ ಅವರನ್ನೂ ಠಾಣೆಗೆ ಕರೆಸಿ ಅವಮಾನಿಸಿದ್ದಾರೆ. ವಶಕ್ಕೆ ಪಡೆದಿದ್ದ ಈ ಮೂವರನ್ನೂ ತಡರಾತ್ರಿ ಬಿಟ್ಟು ಕಳುಹಿಸಿದ್ದಾರೆ. ಮೂರ್ತಿಕಾರನನ್ನು ಥಳಿಸಿದ ಎಸಿಪಿ ಶಿವಾರೆಡ್ಡಿ ಕ್ಷಮೆ ಯಾಚಿಸಿದ್ದಾರೆ. ಆದರೆ, ಕನ್ನಡ ಹೋರಾಟಗಾರರ ದನಿ ಹತ್ತಿಕ್ಕುತ್ತಿರುವ ಪೊಲೀಸರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮೂಲಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲು ಮುಂದಾಗಿದ್ದಕ್ಕೆ ಮೂವರನ್ನೂ ವಶಕ್ಕೆ ಪಡೆಯಲಾಗಿತ್ತು. ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ’ ಎಂದು ಕಾಕತಿ ಠಾಣೆ ಪೊಲೀಸರು ತಿಳಿಸಿದರು.

‘ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ‘ಮೂರ್ತಿಕಾರನಿಗೆ ಪೊಲೀಸರು ಬೂಟಿನಿಂದ ಒದ್ದಿದ್ದಾರೆ ಎನ್ನುವುದು ಸುಳ್ಳು. ಆ ವ್ಯಕ್ತಿಯು ನಮ್ಮ ಪೊಲೀಸರು ವಿಚಾರಿಸಲು ಹೋದಾಗ ಸುಳ್ಳು ಮಾಹಿತಿ ನೀಡಿದ್ದಾರೆ. ಯಾರಿಗೂ ಪ್ರತಿಮೆ ಮಾಡಿಕೊಡುತ್ತಿಲ್ಲ ಎಂದು ತಿಳಿಸಿದ್ದಾರೆ. ರಾತ್ರೊರಾತ್ರಿ ಮೂರ್ತಿ ಡೆಲಿವರಿಗೆ ಯೋಜಿಸಿದ್ದು ಗೊತ್ತಾಗಿದ್ದಕ್ಕೆ ನಮ್ಮವರು ವಿಚಾರಣೆ ನಡೆಸಿದ್ದಾರೆ. ಬೈದಿದ್ದಾರೆ. ಎಚ್ಚರಿಕೆ ಕೊಟ್ಟಿದ್ದಾರೆ. ಬಳಿಕ ಬಿಟ್ಟು ಕಳುಹಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.