ADVERTISEMENT

ಪ್ರತಿ ಹಳ್ಳಿಗೂ ಕನಿಷ್ಠ ₹3 ಕೋಟಿ ಅನುದಾನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಸುಳಗಾ, ಕೊಂಡಸಕೊಪ್ಪ ಗ್ರಾಮಗಳಲ್ಲಿ ದೇವಸ್ಥಾನ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 15:41 IST
Last Updated 7 ಫೆಬ್ರುವರಿ 2026, 15:41 IST
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸ್ಕೊಪ್ಪದಲ್ಲಿ ಶುಕ್ರವಾರ ವಿಠ್ಠಲ ಬೀರ ದೇವರ ಹಾಗೂ ಬಾಗೂಬಾಯಿ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ಸಚಿವೆ ಲಕ್ಷ್ ಮೀ ಹೆಬ್ಬಾಳಕರ ಅವರು ರಾಣಿ ಚನ್ನಮ್ಮನ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸ್ಕೊಪ್ಪದಲ್ಲಿ ಶುಕ್ರವಾರ ವಿಠ್ಠಲ ಬೀರ ದೇವರ ಹಾಗೂ ಬಾಗೂಬಾಯಿ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ಸಚಿವೆ ಲಕ್ಷ್ ಮೀ ಹೆಬ್ಬಾಳಕರ ಅವರು ರಾಣಿ ಚನ್ನಮ್ಮನ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು   

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಕನಿಷ್ಠ ₹3 ಕೋಟಿಯಿಂದ ₹5 ಕೋಟಿಯಷ್ಟು ಅನುದಾನ ನೀಡಿದ್ದೇನೆ. ಕಾಮಗಾರಿಗಳೂ ಪ್ರಗತಿಯಲ್ಲಿವೆ. ಜನರ ಧಾರ್ಮಿಕ ಭಾವನೆಗೆ ಬೆಲೆ ಕೊಟ್ಟು 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ್ದೇನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಕ್ಷೇತ್ರದ ಸುಳಗಾ (ಯು) ಗ್ರಾಮದಲ್ಲಿ ಶನಿವಾರ ಮಹಾಲಕ್ಷ್ಮಿ ಮಂದಿರದ ವಾಸ್ತುಶಾಂತಿ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚುನಾವಣೆ ಪೂರ್ವ ನೀಡಿದ ಎಲ್ಲ ಭಾಷೆಗಳನ್ನೂ ಈಡೇರಿಸುವಲ್ಲಿ ಶ್ರಮ ಹಾಕಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುವವರ ಬಗ್ಗೆ ನೀವು ಗಮನ ಇಡಬೇಕು’ ಎಂದರು.

ಇದೇ ಸಮಯದಲ್ಲಿ ದೇವಸ್ಥಾನ ನಿರ್ಮಾಣಕ್ಕಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಕಾಡಾ ಅಧ್ಯಕ್ಷ ಯುವರಾಜ ಕದಂ, ಬಾಳು ದೇಸೂರಕರ್, ಬಾಗಣ್ಣ ನರೋಟಿ, ಸಂಜಯ ಪಾಟೀಲ ಇತರರು ಇದ್ದರು.

ADVERTISEMENT

ಚಿನ್ನದ ಸರದೊಂದಿಗೆ ಸನ್ಮಾನ: ಗ್ರಾಮೀಣ ಕ್ಷೇತ್ರದ ಕೊಂಡಸ್ಕೊಪ್ಪದಲ್ಲಿ ನಿರ್ಮಿಸಿದ ವಿಠ್ಠಲ ಬೀರ ದೇವರ ಹಾಗೂ ಬಾಗೂಬಾಯಿ ದೇವಸ್ಥಾನ ಉದ್ಘಾಟನೆ ಶುಕ್ರವಾರ ನೆರವೇರಿತು. ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಗ್ರಾಮದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಿದ ಜನ, ಚಿನ್ನದ ಸರ ಹಾಕಿ ಗೌರವಿಸಿದರು.

₹1.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ದೇವಸ್ಥಾನ ಉದ್ಘಾಟಿಸಿದ ಸಚಿವೆ, ‘ನುಡಿದಂತೆ ನಡೆದ ತಾಯಿ’ ಎನ್ನುವ ಫ್ಲೆಕ್ಸ್‌ಅನ್ನು ಊರಲ್ಲಿ ಹಾಕಿದ್ದೀರಿ. ಶಾಸಕಿಯಾಗಿ ಕ್ಷೇತ್ರದ ಜನರು ಕೊಟ್ಟ ಅವಕಾಶವನ್ನು ಸೂಕ್ತವಾಗಿ ನಿರ್ವಹಿಸುತ್ತಿದ್ದೇನೆ. ಜನರ‌ಸೇವೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು’ ಎಂದರು.

ದೇವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಮಾಳಿಂಗ ಸಾಂಬ್ರೇಕರ್ ಮಾತನಾಡಿ, ‘ಹಿಂದೆ ಶಾಸಕರಾದವರು ಚಪ್ಪಾಳೆ ಹೊಡೆಸಿಕೊಂಡು ಹೋಗುತ್ತಿದ್ದರು. ಕೆಲಸ ಮಾಡುತ್ತಿರಲಿಲ್ಲ. ದೇವಸ್ಥಾನ ನಿರ್ಮಾಣ ಮಾಡಲು, ಊರಿನ ಅಭಿವೃದ್ಧಿ ಮಾಡಲು ಈ ಹಿಂದೆ ಮಾಡಿದ ನಮ್ಮ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಈಗ ಆಗಿದೆ. ಲಕ್ಷ್ಮೀ ಹೆಬ್ಬಾಳಕರ ನಿಜವಾಗಿ ಕೊಂಡಸಕೊಪ್ಪದ ಮಗಳು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ‌ಹಲಗಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಿಠ್ಠಲ ಸಾಂಬ್ರೆಕರ್ ಮಾತನಾಡಿದರು. ಸುಜಯ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯರು, ಸಾಗರ್ ಪೂಜಾರಿ, ಬಾಳಾರಾಮ ಪಾಟೀಲ, ಮನೋಹರ ಮುಚ್ಚಂಡಿ, ಪಿಡಿಒ ಆಶಾ ಹಾಗೂ ಮುಖಂಡರು ಇದ್ದರು.

Quote - 300 ಮತ ಇರುವ ಕೊಂಡಸಕೊಪ್ಪದಲ್ಲಿ ₹15 ಕೋಟಿಯ ಕೆಲಸ ಮಾಡಿಸಿದ್ದೇನೆ. ಮತಗಳನ್ನು ನೋಡಿ ಕೆಲಸ ಮಾಡುವವಳು ನಾನಲ್ಲ. ಜನರಿಗೆ ಬೇಕಾದದ್ದು ಮಾಡುತ್ತೇನೆ ಲಕ್ಷ್ಮೀ ಹೆಬ್ಬಾಳಕರ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.