
ಅಥಣಿ : ರೈತರು ಕಷ್ಟಪಟ್ಟು ಬೆಳೆದ ಪ್ರತಿ ಟನ್ ಕಬ್ಬಿಗೆ ₹3500 ಘೋಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹೆಸರು ಸೇನೆ ವತಿಯಿಂದ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಆಶ್ರಯದಲ್ಲಿ ಪಟ್ಟಣದ ಎಲ್ಲ ಪ್ರಮುಖ ವೃತ್ತಗಳಲ್ಲಿ ನೂರಾರು ರೈತರು ಧರಣಿ ಹಮ್ಮಿಕೊಂಡು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಅಥಣಿ ಸಂಪೂರ್ಣ ಸ್ಥಬ್ದಗೊಂಡು ರೈತರಿಗೆ ಬೆಂಬಲ ನೀಡಿತು. ಪಟ್ಟಣದ ಶಿವಯೋಗಿ ವೃತ್ತದಲ್ಲಿ ಸೋಮವಾರ ತಡರಾತ್ರಿ ಒಂದು ಗಂಟೆಯಿಂದ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದರು .
ದರೂರ ಸೇತುವೆ ಮೇಲೆ ಸ್ಥಳೀಯ ರೈತರು, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಜು ಜಂಬಗಿ ನೇತೃತ್ವದಲ್ಲಿ,ಅಂಬೇಡ್ಕರ್ ವೃತ್ತದಲ್ಲಿ ಶಿವಾನಂದ ಖೋತ ನೇತೃತ್ವದಲ್ಲಿ, ಶಿವಯೋಗಿ ವೃತ್ತದಲ್ಲಿ ಮಹಾದೇವ ಮಡಿವಾಳ ನೇತೃತ್ವದಲ್ಲಿ, ಬಸವೇಶ್ವರ ವೃತ್ತದಲ್ಲಿ ಪ್ರಕಾಶ ಪೂಜಾರಿ ನೇತೃತ್ವದಲ್ಲಿ ಹೀಗೆ ವಿವಿಧ ರೈತ ಮುಖಂಡರ ನೇತೃತ್ವದಲ್ಲಿ ಮುಖಂಡರು ರಸ್ತೆ ತಡೆ ನಡೆಸಿದರು.
ರೈತ ಮುಖಂಡ ಮಹಾದೇವ ಮಡಿವಾಳ, ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ಇಲ್ಲವಾದರೆ ಎಸ್‌ಎಪಿ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
‘ಗುರ್ಲಾಪುರ ಕ್ರಾಸ್‌ದಲ್ಲಿ ಅಹೋರಾತ್ರಿ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ. ಜೊತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ನಮ್ಮ ಸಂಘಟನೆ ವತಿಯಿಂದ ರಸ್ತೆ ತಡೆ ಚಳವಳಿಯೂ ಮುಂದುವರೆದಿದೆ. ಅನಿವಾರ್ಯವಾಗಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಅದಕ್ಕಾಗಿ ಮಂಗಳವಾರ ಅಥಣಿ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿತ್ತು’ ಎಂದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ನೇತೃತ್ವದಲ್ಲಿ ಬಿಜೆಪಿಯ ನಾಯಕರು, ಕನ್ನಡ ಪರ ಸಂಘಟನೆಗಳು, ಅಥಣಿ ನ್ಯಾಯವಾದಿಗಳ ಸಂಘ, ಅಥಣಿ ಜಿಲ್ಲಾ ಹೋರಾಟ ಸಮಿತಿ, ವಿವಿಧ ಕನ್ನಡ ಪರ ಸಂಘಟನೆ ಗಳು ಹಾಗೂ ಸಾಹಿತಿಗಳು, ನಾಗರಿಕರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹತ್ತಾರು ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿದರು.
ಮಹಾದೇವ ಮಡಿವಾಳ, ರಾಜು ಜಂಬಗಿ, ಸಂಗಪ್ಪ ಕರಿಗಾರ, ಶಿವಾನಂದ ಖೋತ, ಮಹಾದೇವ ಕುಚನೂರ,ಪ್ರಕಾಶ ಪೂಜಾರಿ, ಮಹಮ್ಮದ ಜಮಾದಾರ, ಹಣಮಂತ ನಾಯಿಕ, ಮುಖಂಡರು ಹೋರಾಟಗಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.