ADVERTISEMENT

ಅಥಣಿ: ಗಮನಸೆಳೆದ ಸಖಿ, ಅಂಗವಿಕಲರ ಮತಗಟ್ಟೆ

ಪಟ್ಟಣದಲ್ಲಿ ನೀರಸ, ಹಳ್ಳಿಗಳಲ್ಲಿ ಬಿರುಸು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 15:00 IST
Last Updated 5 ಡಿಸೆಂಬರ್ 2019, 15:00 IST
ಅಥಣಿಯ ಅಬ್ದುಲ್‌ ಕಲಾಂ ಪ್ರೌಢಶಾಲೆಯಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿತ್ತು
ಅಥಣಿಯ ಅಬ್ದುಲ್‌ ಕಲಾಂ ಪ್ರೌಢಶಾಲೆಯಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿತ್ತು   

ಅಥಣಿ: ಕ್ಷೇತ್ರದ ಉಪ ಚುನಾವಣೆ ಮತದಾನ ಗುರುವಾರ ಶಾಂತಿಯುತವಾಗಿ ನಡೆಯಿತು.

‘ಹಿಂದಿನ ಯಾವುದೇ ಚುನಾವಣೆಯಲ್ಲೂ ಇಷ್ಟೊಂದು ಶಾಂತಿಯುತವಾಗಿ ಮತದಾನ ನಡೆದಿರಲಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಹೊಸ ದಾಖಲೆ ಸೃಷ್ಟಿಯಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ’ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.

‘ಯಾವುದೇ ಮತಗಟ್ಟೆಯಲ್ಲೂ ಯಾವುದೇ ಪಕ್ಷದ ಕಾರ್ಯಕರ್ತರು ಕೂಡ ತೊಂದರೆ ಕೊಟ್ಟಿಲ್ಲ. ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ಮತದಾರರು ಉತ್ಸಾಹದಿಂದ ಬಂದು ಮತ ಹಕ್ಕು ಚಲಾಯಿಸಿದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಪಟ್ಟಣದಲ್ಲಿ ನಿರಸ ಪ್ರತಿಕ್ರಿಯೆ ಕಂಡುಬಂತು. ಇಲ್ಲಿ ಹಲವು ಮತಗಟ್ಟೆಗಳಿದ್ದರೂ ಬೆಳಿಗ್ಗೆಯಿಂದಲೂ ಸಂಜೆವರೆಗೂ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ಕಡೆಗಳ ಮತಗಟ್ಟೆ ಸಮೀಪದಲ್ಲಿ ಏಜೆಂಟರೇ ಹೆಚ್ಚಾಗಿದ್ದರು. ಆದರೆ, ಹಳ್ಳಿಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಹಿಳೆಯರಿಗಾಗಿ ಪಟ್ಟಣದ ಅಬ್ದುಲ್‌ ಕಲಾಂ ಪ್ರೌಢಶಾಲೆಯಲ್ಲಿ ‘ಸಖಿ’ ಮತಗಟ್ಟೆ ಸ್ಥಾಪಿಸಲಾಗಿತ್ತು. ಇದು ಎಲ್ಲರ ಗಮನಸೆಳೆಯಿತು. ಇಡೀ ಮತಗಟ್ಟೆಯನ್ನು ಪಿಂಕ್‌ ಬಣ್ಣದಿಂದ ಅಲಂಕರಿಸಲಾಗಿತ್ತು. ಬಲೂಲುಗಳಿಂದ ಸ್ವಾಗತ ಕಮಾನು ಹಾಕಲಾಗಿತ್ತು. ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸಲಾಗಿತ್ತು. ಸಿಬ್ಬಂದಿಯು ಇಳಕಲ್‌ ಸೀರೆ ಧರಿಸಿ ಸಂಭ್ರಮದಿಂದ ಕಾರ್ಯನಿರ್ವಹಿಸಿದ್ದು ವಿಶೇಷವಾಗಿತ್ತು.

ಮಕ್ಕಳ ಸೇವೆ: ಅಂಗವಿಕಲರು, ವಯೋವೃದ್ಧರನ್ನು ಮತ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು ಸಹಾಯ ಮಾಡಿದರು. ಮತದಾರರಿಗೆ ನೆರವಾದರು.

ಅಥಣಿಯ ಮತಗಟ್ಟೆಯೊಂದರಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಭಾವಚಿತ್ರವನ್ನು ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರ ಫೋಟೊ ಪಕ್ಕದಲ್ಲಿಟ್ಟು ಮತದಾನ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ. ಯಾವ ಮತಗಟ್ಟೆಯಲ್ಲಿ ಈ ಪ್ರಸಂಗ ನಡೆದಿದೆ ಎನ್ನುವುದು ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.