ಅಥಣಿ ತಾಲ್ಲೂಕಿನ ಹುಲಗಬಾಳಿಯ ಮಾಂಗ ವಸತಿ ಪ್ರದೇಶದಿಂದ ಬುಧವಾರ ದನ– ಕರುಗಳನ್ನ ನದಿಯಲ್ಲಿ ಈಜಿಕೊಂಡು ದಾಟಿಸಿದ ರೈತ
ಅಥಣಿ: ತಾಲ್ಲೂಕಿನ ಹುಲಗಬಾಳಿ ಗ್ರಾಮದ ವ್ಯಾಪ್ತಿಗೆ ಬರುವ ಮಾಂಗ ಜನವಸತಿ ಪ್ರದೇಶವನ್ನು ಕೃಷ್ಣಾ ನದಿ ನೀರು ಸುತ್ತುವರಿದಿದೆ. ಇಲ್ಲಿರುವ 50 ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿವೆ. ಬುಧವಾರ ಸಂಜೆ ಜನ ಮತ್ತು ಜಾನುವಾರುಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕೃಷ್ಣಾ ನದಿ ನೀರು ಹೆಚ್ಚಿದೆ. ಸದ್ಯ ಸಂತ್ರಸ್ತರಿಗೆ ಹುಲುಗಬಾಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ.
ತಹಶೀಲ್ದಾರ್ ಯು.ವಾಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಡಿಎಸ್ಪಿ ಶ್ರೀಪಾದ್ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು. ಈ ವೇಳೆ ಆಕ್ರೋಶಗೊಂಡ ಜನ ತಮಗೆ ಶಾಶ್ವತ ನೆಲೆ ಕಲ್ಪಿಸಬೇಕು. ಪ್ರತಿ ವರ್ಷ ತಾತ್ಕಾಲಿಕ ಸ್ಥಳಾಂತರ ಬೇಡ. ಅಲ್ಲಿಯವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಜನರ ಮನವೊಲಿಸಿದ ತಹಶೀಲ್ದಾರ್, ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಸದ್ಯ ಅಪಾಯದ ಮಟ್ಟವಿದೆ. ಸುರಕ್ಷಿತ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮನವೊಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.