ADVERTISEMENT

ಅಥಣಿ: ಟ್ರ್ಯಾಕ್ಟರ್‌ ಉರುಳಿ ಇಬ್ಬರು ಯುವಕರ ಸಾವು

ಆಯತಪ್ಪಿ 15 ಅಡಿ ಆಳಕ್ಕೆ ಬಿದ್ದ ಟ್ರ್ಯಾಕ್ಟರ್‌, ಮಹಾರಾಷ್ಟ್ರದ ಜತ್ತ ಬಳಿ ಸಂಭವಿಸಿದ ಅವಘಡ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 2:50 IST
Last Updated 10 ಅಕ್ಟೋಬರ್ 2025, 2:50 IST
ಅಭಿಷೇಕ ಆರವೇಕರ
ಅಭಿಷೇಕ ಆರವೇಕರ   

ಅಥಣಿ: ತಾಲ್ಲೂಕಿನ ಗಡಿಗೆ ಹೊಂದಿಕೊಂಡ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಮುಚ್ಚಂಡಿ ಗ್ರಾಮದಲ್ಲಿ ಟ್ರ‍್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು, ತಾಲ್ಲೂಕಿನ ಚಿಕ್ಕಟ್ಟಿ ಗ್ರಾಮದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಭಿಷೇಕ ವಿನೋದ ಆರವೆಕರ (22) ಮತ್ತು ಸಲ್ಮಾನ್ ಸಿಕಂದರ ಮುಕ್ಕೇರಿ (19) ಮೃತಪಟ್ಟವರು. ಮುತ್ತು ಅಶೋಕ ಗೌಡರ (20) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಜತ್ತ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೇಗವಾಗಿ ಚಲಿಸುತ್ತಿದ್ದ ಟ್ರ‍್ಯಾಕ್ಟರ್‌ ಚಾಲಕನ ನಿಯಂತ್ರಣ ತಪ್ಪಿ ಸುಮಾರು 15 ಅಡಿ ಆಳದ ಕಂದಕಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ. ಜತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವಗಳನ್ನು ಅಥಣಿ ಪೊಲೀಸರ ಮೂಲಕ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ADVERTISEMENT

ಅಪರಿಚಿತ ವ್ಯಕ್ತಿಯ ಶವ ಪತ್ತೆ: ಕಾಗವಾಡ: ತಾಲ್ಲೂಕಿನ ಐನಾಪುರ ಪಟ್ಟಣದ ಪಶು ಆಸ್ಪತ್ರೆ ರಸ್ತೆ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಅಂದಾಜು 50 ರಿಂದ 55 ವರ್ಷ ವಯಸ್ಸಿದ್ದು, ಸದರಿ ವ್ಯಕ್ತಿ ಬಿಳಿಯ ಬಣ್ಣದ ಅಂಗಿ ಹಾಗೂ ಗ್ರೇ ಕಲರ್ ನೈಟ್ ಪ್ಯಾಂಟ್ ಧರಿಸಿದ್ದಾನೆ. ಸದರಿ ವ್ಯಕ್ತಿಯ ಸಂಬಂಧಿಗಳು ಇದ್ದಲ್ಲಿ ಕಾಗವಾಡ ಪೊಲೀಸ್ ಠಾಣೆಯ ಪಿಎಸ್ಐ 9480804063 ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸಲ್ಮಾನ್ ಮುಕ್ಕೆರಿ

ಪ್ರತ್ಯೇಕ ಘಟನೆ: ಇಬ್ಬರ ಆತ್ಮಹತ್ಯೆ

ಹಿರೇಬಾಗೇವಾಡಿ: ಸಮೀಪದ ನಾಗೇರಹಾಳ ಗ್ರಾಮದ ರೈತ ಬಸಪ್ಪ ಲಕ್ಕಪ್ಪ ಡೊಂಗರಗಾಂವಿ (70) ಅವರು ಸಾಲದ ಬಾಧೆಯಿಂದ ವಿದ್ಯುತ್‌ ಕಂಬಕ್ಕೆ ನೇಣು ಹಾಕಿಕೊಂಡು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸಪ್ಪ ಅವರು ಕೆಕೆ ಕೊಪ್ಪ ಸಹಕಾರ ಸಂಘದಲ್ಲಿ ₹3 ಲಕ್ಷ ಸಾಲ ಮಾಡಿದ್ದರು. ಈ ಸಾಲ ತೀರಿಸಲಾಗದೇ ಊರ ಹೊರಗಿನ ವಿದ್ಯುತ್‌ ಕಂಬಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ಮೃತನ ಪುತ್ರ ದೂರಿನಲ್ಲಿ ತಿಳಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಮುತ್ನಾಳ ಗ್ರಾಮದಲ್ಲಿ ಗುರುವಾರ ಅಶೋಕ ನಾಗಪ್ಪ ಕುಡಚಿ (23) ಎಂಬ ಯುವಕ ಮಾನಸಿಕವಾಗಿ ನೊಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಗೆ ಉದ್ಯೋಗವೂ ಸಿಗುತ್ತಿಲ್ಲ ಮದುವೆಯೂ ಆಗುತ್ತಿಲ್ಲ ಎಂದು ಯುವಕ ಖಿನ್ನತೆಗೆ ಒಳಗಾಗಿದ್ದ ಎಂದು ಮೃತನ ಸಹೋದರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಎರಡೂ ಪ್ರಕರಣಗಳ ಬಗ್ಗೆ ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.