ಬೆಳಗಾವಿ: ‘ನಗರದಲ್ಲಿ ವಿವಿಧ ಕಂಪನಿಗಳು ಆ್ಯಪ್ ಬಳಸಿ, ಸಾರ್ವಜನಿಕರಿಗೆ ಬಾಡಿಗೆ ಆಧಾರದಲ್ಲಿ ಆಟೊರಿಕ್ಷಾ ಸೇವೆ ಒದಗಿಸಲು ತಯಾರಿ ನಡೆಸಿವೆ. ಅವುಗಳಿಗೆ ಪರವಾನಗಿ ನೀಡಬೇಡಿ’ ಎಂದು ಆಗ್ರಹಿಸಿ, ಉತ್ತರ ಕರ್ನಾಟಕ ಆಟೊರಿಕ್ಷಾ ಚಾಲಕರ ಸಂಘದವರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
‘ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ, ನಗರದಲ್ಲಿ ಸುಮಾರು 10 ಸಾವಿರ ಆಟೊರಿಕ್ಷಾ ಚಾಲಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಗ್ರಾಹಕರ ಕೊರತೆ ಎದುರಿಸುತ್ತಿರುವ ಚಾಲಕರು ಬ್ಯಾಂಕಿನ ಸಾಲದ ಕಂತು ಭರಿಸಲಾಗದೆ ಒದ್ದಾಡುತ್ತಿದ್ದಾರೆ. ಈ ಮಧ್ಯೆ, ವಿವಿಧ ಖಾಸಗಿ ಕಂಪನಿಯವರು ಆ್ಯಪ್ ಬಳಸಿ ಗ್ರಾಹಕರಿಗೆ ಆಟೊರಿಕ್ಷಾ ಸೇವೆ ಒದಗಿಸಲು ಪ್ರಯತ್ನಿಸುತ್ತಿದ್ದಾರೆ. ಅವಕಾಶ ಸಿಕ್ಕರೆ ಕಂಪನಿಯವರು ಹಿಡಿತ ಸಾಧಿಸಿ ಆಟೊರಿಕ್ಷಾ ಚಾಲಕರ ಬದುಕು ಮತ್ತಷ್ಟು ಕಷ್ಟಕರವಾಗುತ್ತದೆ. ಇದಕ್ಕೆ ಆಸ್ಪದ ಕೊಡಬೇಡಿ’ ಎಂದು ಆಗ್ರಹಿಸಿದರು.
‘ಸ್ಮಾರ್ಟ್‌ಸಿಟಿ ಯೋಜನೆ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಬೆಳಗಾವಿಯಲ್ಲಿ 40 ಆಟೊರಿಕ್ಷಾ ನಿಲ್ದಾಣ ನಿರ್ಮಿಸಬೇಕು. ಎಲೆಕ್ಟ್ರಿಕ್ ಆಟೊರಿಕ್ಷಾಗಳಿಗೆ ಪರವಾನಗಿ ಕೊಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಜೀವನ ಉತ್ಕುರಿ, ಶೇಖರಯ್ಯ ಮಠಪತಿ, ಬಸವರಾಜ ಅವರಳ್ಳಿ, ಬಾಬಾಜಾನ ಬಳಗಾನೂರ, ಮನ್ಸೂರ ಹೊಂಗೇಕರ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.