ADVERTISEMENT

ಶ್ರದ್ಧೆ, ಭಕ್ತಿ ಇದ್ದಲ್ಲಿ ದೇವರಿದ್ದಾನೆ: ಮುರಘೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 15:25 IST
Last Updated 2 ಜನವರಿ 2023, 15:25 IST
ಸವದತ್ತಿ ತಾಲ್ಲೂಕಿನ ತಲ್ಲೂರ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಭಾನುವಾರ ಅಯ್ಯಪ್ಪ ಸ್ವಾಮಿ ಮಹಾಪೂಜೆ ಜರುಗಿತು
ಸವದತ್ತಿ ತಾಲ್ಲೂಕಿನ ತಲ್ಲೂರ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಭಾನುವಾರ ಅಯ್ಯಪ್ಪ ಸ್ವಾಮಿ ಮಹಾಪೂಜೆ ಜರುಗಿತು   

ತಲ್ಲೂರ: ಎಲ್ಲಿ ಭಕ್ತಿ, ಶ್ರದ್ಧೆ ಇರುತ್ತದೆಯೋ ಅಲ್ಲಿ ಭಗವಂತ ನೆಲೆಸುತ್ತಾನೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ ಹೇಳಿದರು.

ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ 16ನೇ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಜ್ಯೋತಿ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ಭಗವಂತನ ಒಲುಮೆ ಆಗಬೇಕಾದರೆ ನಿರ್ಮಲವಾದ ಭಕ್ತಿ ಬೇಕು. ಅಂತಹ ಶ್ರದ್ಧಾಭಕ್ತಿ ಹಾಗೂ ಪರಿಶ್ರಮವನ್ನು ನಾನು ತಲ್ಲೂರಿನ ಅಯ್ಯಪ್ಪ ಭಕ್ತರಲ್ಲಿ ಕಂಡಿದ್ದೇನೆ. ಮುಂದಿನ ದಿನಮಾನಗಳಲ್ಲಿ ಇಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣವಾಗಲ್ಲಿದ್ದು ಇದೊಂದು ಧಾರ್ಮಿಕ ಕ್ಷೇತ್ರವಾಗಿ ಪರಿಣಮಿಸಲಿದೆ’ ಎಂದರು.

ಯರಗಟ್ಟಿಯ ಈರಣ್ಣ ಗುರುಸ್ವಾಮಿ ಮಾತನಾಡಿ, ‘ಪ್ರತಿ ವರ್ಷದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಶರಣ ಚಿಂತನ ಪುರಾಣ ಪ್ರವಚನ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆದುಕೊಂಡು ಬರುತ್ತಿವೆ’ ಎಂದರು.

ADVERTISEMENT

ಇದಕ್ಕೂ ಮುನ್ನ ಗಜಾನನ ದೇವಸ್ಥಾನದಿಂದ ಅಯ್ಯಪ್ಪಸ್ವಾಮಿ ಭಾವಚಿತ್ರದೊಂದಿಗೆ ಪಲ್ಲಕ್ಕಿ ಮಹೋತ್ಸವ ಹಾಗೂ ಜ್ಯೋತಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳಗಳೊಂದಿಗೆ ಸಂಚರಿಸಿತು. ಶಬರಿಮಲೆ ಮಾದರಿಯಲ್ಲಿ ನಿರ್ಮಿಸಿದ 18 ಮೆಟ್ಟಿಲುಗಳನ್ನು ದೀಪಗಳ ಎಣ್ಣೆಸೇವೆ, ಮಹಾಪೂಜೆ, ಅನ್ನ ಪ್ರಸಾದ ಜರುಗಿತು.

ತೊರಗಲ್ಲ ಮಠದ ದೀಪಕ ಸ್ವಾಮೀಜಿ, ವಿಕ್ರಮ ಗುರುಸ್ವಾಮಿ, ಮಲ್ಲಪ್ಪ ಗುರುಸ್ವಾಮಿ, ಪ್ರಶಾಂತ ಗುರುಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಪಂಚಲಿಂಗಪ್ಪ ಸ್ವಾಮಿ, ಉಮೇಶ ಸ್ವಾಮಿ, ಸಂಗಮೇಶ ಸ್ವಾಮಿ, ಪಂಚು ಸ್ವಾಮಿ ಹಾಗೂ ಸುತ್ತ ಮುತ್ತಲಿನ ಅಯ್ಯಪ್ಪ ಮಾಲಾಧಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.