ADVERTISEMENT

ಡಾ.ಬಾಬು ಜಗಜೀವನರಾಂ ದೇಶದ ಹಸಿರು ಕ್ರಾಂತಿಯ ಹರಿಕಾರ

ಜಿಲ್ಲಾಡಳಿತದಿಂದ ಮಾಜಿ ಉಪಪ್ರಧಾನಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 12:44 IST
Last Updated 5 ಏಪ್ರಿಲ್ 2019, 12:44 IST
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು   

ಬೆಳಗಾವಿ: ‘ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನರಾಂ ಅವರಿಗೆ ಸಲ್ಲುತ್ತದೆ’ ಎಂದು ನಗರಪಾಲಿಕೆ ಆಯುಕ್ತ ಇಬ್ರಾಹಿಂ ಮೈಗೂರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಪಾಲಿಕೆ ಹಾಗೂ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಸಂಗಮೇಶ್ವರ ನಗರದಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ದಿ.ಬಾಬು ಜಗಜೀವನರಾಂ ಅವರ 112ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದರು. ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದರು’ ಎಂದು ತಿಳಿಸಿದರು.

ADVERTISEMENT

‘ಇಂತಹ ಮಹಾನ್‌ ನಾಯಕರ ಕೊಡುಗೆ, ತತ್ವಾದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ಪ್ರೊ.ಪ್ರಕಾಶ ಕಟ್ಟಿಮನಿ ಮಾತನಾಡಿ, ‘ಬಾಬು ಜಗಜೀವನರಾಂ ಅವರು ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗೂ ದಕ್ಷ ಆಡಳಿತಗಾರರಾಗಿದ್ದರು. ಹಸಿರು ಕ್ರಾಂತಿಯ ಹರಿಕಾರರಾಗಿ ಜನಸಾಮಾನ್ಯರು ಎಂದಿಗೂ ಮರೆಯದ ವ್ಯಕ್ತಿತ್ವವನ್ನು ಹೊಂದಿದ್ದರು. ಬಡವರು, ದೀನ–ದಲಿತರ ಕಣ್ಣೀರು ಒರೆಸಿದ ಶ್ರೇಷ್ಠ ವ್ಯಕ್ತಿತ್ವದವರಾಗಿದ್ದರು’ ಎಂದು ಹೇಳಿದರು.

2017–18ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಉಮಾ ಸಾಲಿಗೌಡರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಬಡಿಗೇರ, ಗುತ್ತಿಗೆದಾರ ಮಲ್ಲಿಕಾರ್ಜುನ ರಾಸಿಂಗೆ, ಪಾಲಿಕೆ ಎಂಜಿನಿಯರ್‌ ಲಕ್ಷ್ಮಿ ನಿಪ್ಪಾಣಿಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಸಹಾಯಕ ನಿದೇರ್ಶಕ ಅರುಣ ನಿರಗಟ್ಟಿ, ಹೆಸ್ಕಾಂ ಎಇಇ ಅಶ್ವಿನ್ ಶಿಂಧೆ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಜಗಜೀವನರಾಂ ಭಾವಚಿತ್ರದ ಮೆರವಣಿಗೆಗೆ ನಡೆಯಿತು. ಪ್ರಾದೇಶಿಕ ಆಯುಕ್ತ ತುಷಾರ್‌ ಗಿರಿನಾಥ್, ಜಿಲ್ಲಾಧಿಕಾರಿ ಡಾ.ಆರ್‌. ವಿಶಾಲ್, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌, ಡಿಸಿಪಿ ಯಶೋದಾ ಒಂಟಗೋಡಿ ಇದ್ದರು. ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.