ADVERTISEMENT

3 ಸಾವಿರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಾಳೆ: ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 7:40 IST
Last Updated 23 ಮಾರ್ಚ್ 2025, 7:40 IST
<div class="paragraphs"><p>ಲಕ್ಷ್ಮಿ ಹೆಬ್ಬಾಳಕರ</p></div>

ಲಕ್ಷ್ಮಿ ಹೆಬ್ಬಾಳಕರ

   

ಬೆಳಗಾವಿ: ‘ಇಲ್ಲಿನ ಸಿಪಿಎಡ್‌ ಮೈದಾನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ, ಮಾರ್ಚ್‌ 24ರಂದು ಬೆಳಿಗ್ಗೆ 10.30ಕ್ಕೆ 3 ಸಾವಿರ ಗರ್ಭಿಣಿಯರಿಗೆ ಸಾಮೂಹಿಕವಾಗಿ ಸೀಮಂತ ನಡೆಯಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಯಿ ಮತ್ತು ಮಗು ಆರೋಗ್ಯವಾಗಿ ಇರಲೆಂದು ಈ ಸರ್ಕಾರಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಬರುತ್ತಿರುವ 3 ಸಾವಿರ ಗರ್ಭಿಣಿಯರಿಗೆ ಸೀರೆಯೊಂದಿಗೆ, ಉಡಿ ತುಂಬುತ್ತೇವೆ. ಬಿಸಿಲು ಹೆಚ್ಚಿರುವ ಕಾರಣ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಜರ್ಮನ್ ಟೆಂಟ್ ಹಾಕಲಾಗಿದ್ದು, ಕುಡಿಯುವ ನೀರು, ಉಪಾಹಾರ, ಹೋಳಿಗೆ ಊಟದ ವ್ಯವಸ್ಥೆ ಇದೆ’ ಎಂದರು.

ADVERTISEMENT

‘ಗರ್ಭಿಣಿಯರನ್ನು ಮನೆಯಿಂದ ಕರೆದುಕೊಂಡು ಬರುವುದರಿಂದ ಹಿಡಿದು, ಸುರಕ್ಷಿತವಾಗಿ ಮನೆಗೆ ವಾಪಸ್ ತಲುಪಿಸುವವರೆಗೂ ಕಾಳಜಿ ವಹಿಸುತ್ತೇವೆ. ಇಲಾಖೆಯಿಂದ ಗರ್ಭಿಣಿಯರಿಗೆ ಕಿಟ್ ನೀಡುತ್ತೇವೆ. ಜತೆಗೆ, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಇಲಾಖೆ ವಿವಿಧ ಸೌಕರ್ಯ ತಲುಪಿಸಲಾಗುವುದು’ ಎಂದು ಹೇಳಿದರು.

‘ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭಾಗವಹಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಮತ್ತು ಸಂಸದರಿಗೆ ಆಹ್ವಾನ ಕೊಟ್ಟಿದ್ದೇವೆ. ಇದು ಮೊದಲ ಕಾರ್ಯಕ್ರಮ. ಇದರ ಯಶಸ್ಸು ಆಧರಿಸಿ, ವಿವಿಧ ಹಂತಗಳಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಮಾಡಲಾಗುವುದು. ಇದೇ 26ರಂದು ಬಳ್ಳಾರಿಯಲ್ಲೂ ಕಾರ್ಯಕ್ರಮ ನಡೆಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.