ADVERTISEMENT

ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕಪಾಠ: ಕೌಟಿಲ್ಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 15:39 IST
Last Updated 14 ಮಾರ್ಚ್ 2024, 15:39 IST

ಬೆಳಗಾವಿ: ‘ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ರಾಜ್ಯದಲ್ಲಿ ವಿವಿಧ ಮಂಡಳಿ ಮತ್ತು ನಿಗಮಗಳಿಗೆ ಮೀಸಲಿಟ್ಟ ಅನುದಾನ ಬಿಡುಗಡೆಯಾಗದ ಕಾರಣ, ಹಿಂದುಳಿದ ವರ್ಗದವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ. ಬಜೆಟ್‌ನಲ್ಲಿನ ನಿಧಿಗಳು ಕೇವಲ ಭರವಸೆಯಾಗಿ ಉಳಿದಿವೆ. ಮಂಡಳಿ ಮತ್ತು ನಿಗಮಗಳು ಮುಚ್ಚುವ ಹಂತದಲ್ಲಿವೆ’ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ರಘು ಕೌಟಿಲ್ಯ ಆರೋಪಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ವಿವಿಧ ನಿಗಮ–ಮಂಡಳಿಗಳ ಮೂಲಕ ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಅನುದಾನ ಬಿಡುಗಡೆಗೊಳಿಸಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಈ ಅನುದಾನ ಹೆಚ್ಚಿಸಬೇಕಿತ್ತು. ಆದರೆ, ಯಾವುದೇ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಗಳಿಗೆ ಅರ್ಜಿಯನ್ನೇ ಆಹ್ವಾನಿಸಿಲ್ಲ’ ಎಂದು ದೂರಿದರು.

‘ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೂ ಕಾಂಗ್ರೆಸ್‌ನವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದು, ಕರ್ನಾಟಕವೊಂದರಲ್ಲೇ 26 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ಫಲಾನುಭವಿಗಳು ಶೀಘ್ರ ಯೋಜನೆ ಸದುಪಯೋಗ ಪಡೆಯಲಿದ್ದಾರೆ. ಮೋದಿಯವರ ಕಾರ್ಯಕ್ರಮಗಳು ಧೀರ್ಘ ಅವಧಿಯವರೆಗೆ ಫಲ ನೀಡಲಿವೆಯೇ ಹೊರತು, ಸಿದ್ದರಾಮಯ್ಯನವರ ಜಾತ್ರೆಯಲ್ಲಿ ಒಂದು ಹೊತ್ತಿನ ಊಟದಂತಲ್ಲ’ ಎಂದು ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.