
ಬೈಲಹೊಂಗಲ: ‘ಸಾಹಿತ್ಯವು ನಾಡು ಬೆಳಗುವ ಅಮೂಲ್ಯ ಕ್ಷೇತ್ರವಾಗಿದೆ. ಯುವ ಕವಿಗಳು ತಮ್ಮ ಕವನಗಳ ಮೂಲಕ ಸಮಾಜದ ಕಣ್ಣು ತೆರೆಸಬೇಕು. ಸಾಮಾಜಿಕ ಬದಲಾವಣೆಯ ಹರಿಕಾರರಾಗಬೇಕು’ ಎಂದು ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂಘ ಅಧ್ಯಕ್ಷ ಶಂಕರ ಬೋಳನ್ನವರ ಹೇಳಿದರು.
ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರಿನ ಬಸವ ಸಮಿತಿ ವತಿಯಿಂದ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ, ರಾಜ್ಯಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
‘ಕನ್ನಡವನ್ನು ಉಳಿಸಿ, ಬೆಳೆಸಬೇಕಾದುದು ಕನ್ನಡಿಗರ ಕರ್ತವ್ಯ. ಪಾಲಕರು ತಮ್ಮ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕು. ಓದುವಿಕೆ ಮತ್ತು ಬರೆಯುವಿಕೆಯ ಅನುಭವ ಹೆಚ್ಚಿಸುವ ಸಾಹಿತ್ಯದತ್ತ ಎಲ್ಲರೂ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದರು.
ಮೋಹನ ಪಾಟೀಲ ಮಾತನಾಡಿ, ‘ಯುವ ಕವಿಗಳು, ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಸಮಾಜ ಕಟ್ಟಬೇಕು. ಇಂಗ್ಲಿಷ್ ಮಾಧ್ಯಮದತ್ತ ಸಾಗುತ್ತಿರುವ ಯುವ ಪೀಳಿಗೆಯನ್ನು ಕನ್ನಡದತ್ತ ಸೆಳೆಯಲು ಸಾಹಿತ್ಯ ಕಾರ್ಯಕ್ರಮಗಳು ಸಹಕಾರಿ’ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಕಾರ್ಯದರ್ಶಿ ರವಿಕುಮಾರ ಹುಲಕುಂದ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಕಾಶಿಮ ಜಮಾಧಾರ ಅವರನ್ನು ಸನ್ಮಾನಿಸಲಾಯಿತು.
ಪ್ರೊ. ಸಿ.ಬಿ.ಗಣಾಚಾರಿ, ಇಮ್ರಾಹಿಮ್ ಮುಲ್ಲಾ, ಪರಿಷತ್ ಉಪಾಧ್ಯಕ್ಷ ಶ್ರೀಶೈಲ ಶರಣಪ್ಪನವರ, ಮೋಹನ ಪಾಟೀಲ, ಬಾಳೇಶ ಫಕೀರಪ್ಪನವರ, ಶಿವಾನಂದ ಪಟ್ಟಿಹಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.