ADVERTISEMENT

ಬದುಕು ಬೆಳಗಿದ ಬೇಕರಿ ಉದ್ಯಮ

ಸಹಾಯಕನಾಗಿದ್ದ ವ್ಯಕ್ತಿ ಈಗ ಮಾಲೀಕ

ಸುಧಾಕರ ಎಸ್.ತಳವಾರ, ಬೆಂಗಳೂರು
Published 11 ಏಪ್ರಿಲ್ 2019, 16:15 IST
Last Updated 11 ಏಪ್ರಿಲ್ 2019, 16:15 IST
ಚಿಕ್ಕೋಡಿಯ ಪ್ರಭುವಾಡಿಯಲ್ಲಿ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ರಾಜು ಜಾಧವ ದಂಪತಿ
ಚಿಕ್ಕೋಡಿಯ ಪ್ರಭುವಾಡಿಯಲ್ಲಿ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ರಾಜು ಜಾಧವ ದಂಪತಿ   

ಚಿಕ್ಕೋಡಿ: ಹದಿನೈದು ವರ್ಷಗಳ ಹಿಂದೆ ಸೌದೆಯಿಂದ ಬೇಕರಿ ಉತ್ಪನ್ನಗಳನ್ನು ತಯಾರಿಸುತ್ತಿದ್ದ ದಂಪತಿ ಈಗ ₹ 4 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡು, ಬೇಕರಿ ಉದ್ಯಮದಲ್ಲಿ ತೊಡಗಿದ್ದಾರೆ. ಖರ್ಚು–ವೆಚ್ಚ ಕಳೆದು ನಿತ್ಯ ಕನಿಷ್ಠ ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಸ್ವಾವಲಂಬಿ ಜೀವನ ರೂಪಿಸಿಕೊಂಡಿದ್ದಾರೆ.

ಪಟ್ಟಣದ ಪ್ರಭುವಾಡಿಯ ಜೈ ಮಲ್ಹಾರ್ ಬೇಕರಿ ಮಾಲೀಕ ರಾಜು ರಾಮು ಜಾಧವ ಅವರು, 15 ವರ್ಷಗಳಿಂದ ಮಿಸಳ್‌ ತಯಾರಿಕೆಗೆ ಬೇಕಾಗುವ ಪಾವ್ ಹಾಗೂ ಬ್ರೆಡ್, ಬಿಸ್ಕೆಟ್, ಟೋಸ್ಟ್‌ ಮೊದಲಾದ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಚಿಕ್ಕೋಡಿ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಇವರಿಂದ ಬೇಕರಿ ಉತ್ಪನ್ನಗಳನ್ನು ಖರೀದಿಸುತ್ತಾರೆ.

‘ದಿನವೊಂದಕ್ಕೆ 40ರಿಂದ 50 ಕೆ.ಜಿ. ಮೈದಾ ಹಿಟ್ಟಿನಿಂದ ತಯಾರಿಸಿದ ಬೇಕರಿ ಉತ್ಪನ್ನಗಳಿಂದ ₹ 2,500ರಿಂದ ₹3ಸಾವಿರ ವ್ಯಾಪಾರ ಮಾಡುತ್ತೇವೆ. ₹1,500ರಿಂದ ₹ 1,800 ತನಕ ಖರ್ಚಾಗುತ್ತದೆ. ದಿನವೊಂದಕ್ಕೆ ಕನಿಷ್ಠ ಸಾವಿರ ರೂಪಾಯಿ ಆದಾಯ ಲಭಿಸುತ್ತದೆ. ಈ ಉದ್ಯಮದಿಂದ ಸಂಪಾದಿಸಿದ ಹಣದಲ್ಲಿ ಮೂವರು ಹೆಣ್ಣು ಮಕ್ಕಳಿಗೆ ಮತ್ತು ಒಬ್ಬ ಮಗನಿಗೆ ಶಿಕ್ಷಣ ನೀಡುತ್ತಿದ್ದೇವೆ. ಅವರೂ ಬಿಡುವಿನ ವೇಳೆಯಲ್ಲಿ ಬೇಕರಿ ಉದ್ಯಮದಲ್ಲಿ ಸಹಾಯ ಮಾಡುತ್ತಾರೆ’ ಎನ್ನುತ್ತಾರೆ ರಾಜು ಜಾಧವ.

ADVERTISEMENT

‘ಒಂದೂವರೆ ದಶಕದ ಹಿಂದೆ ಸಹೋದರ ಬೇಕರಿ ಉದ್ಯಮ ಮಾಡುತ್ತಿದ್ದರು. ಅವರ ಬಳಿ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದೆ. ಅವರು ಅನಾರೋಗ್ಯದಿಂದ ಬೇಕರಿ ಉದ್ಯಮದಿಂದ ದೂರ ಉಳಿದರು. ಅದನ್ನೇ ನಾನು ಪತ್ನಿಯೊಂದಿಗೆ ಮುಂದುವರೆಸಿಕೊಂಡು ಬಂದಿದ್ದೇನೆ. ಎರಡು ವರ್ಷಗಳ ಹಿಂದೆ ಸಹಕಾರಿ ಸಂಸ್ಥೆಯೊಂದರಿಂದ ₹ 2 ಲಕ್ಷ ಸಾಲ ಪಡೆದು ₹ 3.50 ಲಕ್ಷ ಮೌಲ್ಯದ ಬೇಕಿಂಗ್ ಮಷಿನ್ ಖರೀದಿಸಿದ್ದೆ. ಈಗ ಸಾಲ ಮರುಪಾವತಿ ಮಾಡಿದ್ದೇನೆ. ₹30 ಸಾವಿರ ಮೌಲ್ಯದ ಕೇಕ್‌ ಮಿಕ್ಸರ್‌ ಮತ್ತು ₹ 1.40 ಲಕ್ಷ ಬೆಲೆ ಬಾಳುವ ಮೈದಾ ಹಿಟ್ಟು ಕಲಸುವ ಮಿಕ್ಸರ್‌ ಖರೀದಿಸಿ ಬೇಕರಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಆಸೆ ಇದೆ’ ಎನ್ನುತ್ತಾರೆ ಅವರು.

ಶ್ರದ್ಧೆಯಿಂದ ಮಾಡಿದರೆ ಎಲ್ಲ ಉದ್ಯಮವೂ ಕೈಹಿಡಿಯುತ್ತದೆ ಎಂಬುದು ಅವರ ಅಭಿಪ್ರಾಯ.

ಸಂಪರ್ಕಕ್ಕೆ: 9741312319.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.