ADVERTISEMENT

ಹುಕ್ಕೇರಿ: ‌ಶಾಸಕ ಬಾಲಚಂದ್ರ ಜಾರಕಿಹೊಳಿ ಭರದ ಪ್ರಚಾರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 1:46 IST
Last Updated 25 ಸೆಪ್ಟೆಂಬರ್ 2025, 1:46 IST
ಹುಕ್ಕೇರಿ ತಾಲ್ಲೂಕಿನ ಘೋಡಗೇರಿಯಲ್ಲಿ ಬೆಮುಲ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣಾ ಪ್ರಚಾರದ ಸಂದ್ರಭದಲ್ಲಿ ಕಾರ್ಯಕರ್ತರು ಬೃಹತ್ ಹಾರ ಹಾಕಿ ಗೌರವಿಸಿದರು. ಅಪ್ಪಣ್ಣಗೌಡ ಪಾಟೀಲ್ ಪ್ಯಾನಲ್ ಅಭ್ಯರ್ಥಿಗಳು ಇದ್ದಾರೆ.
ಹುಕ್ಕೇರಿ ತಾಲ್ಲೂಕಿನ ಘೋಡಗೇರಿಯಲ್ಲಿ ಬೆಮುಲ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣಾ ಪ್ರಚಾರದ ಸಂದ್ರಭದಲ್ಲಿ ಕಾರ್ಯಕರ್ತರು ಬೃಹತ್ ಹಾರ ಹಾಕಿ ಗೌರವಿಸಿದರು. ಅಪ್ಪಣ್ಣಗೌಡ ಪಾಟೀಲ್ ಪ್ಯಾನಲ್ ಅಭ್ಯರ್ಥಿಗಳು ಇದ್ದಾರೆ.   

ಹುಕ್ಕೇರಿ: ‌ನಮ್ಮ ವಿರೋಧಿಗಳು ಸಾವಿರ ಸಲ ಟೀಕಿಸಲಿ, ಅಂತಹ ಯಾವುದೇ ಟೀಕೆ- ಟಿಪ್ಪಣಿಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಅವುಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಯಾರನ್ನೂ ಟೀಕಿಸುವುದಿಲ್ಲ. ಮತ್ತೊಬ್ಬರನ್ನು ಬೈಯುವ ಸಂಸ್ಕೃತಿ ನಮ್ಮದಲ್ಲ ಎಂದು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಮಂಗಳವಾರ ರಾತ್ರಿ ತಾಲ್ಲೂಕಿನ ಘೋಡಗೇರಿಯಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಚುನಾವಣಾ ಅಂಗವಾಗಿ ನಡೆದ ಘೋಡಗೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ವಿರೋಧಿಗಳು ರೈತರ ಹಿತಕ್ಕಾಗಿ ಯಾವ ಯೋಜನೆ ಹಾಕಿಕೊಳ್ಳದೇ ಪ್ರತಿ ಸಂದರ್ಭದಲ್ಲೂ ನಮ್ಮನ್ನು ಬೈಯುವ ಒಂದಂಶದ ಕಾರ್ಯಕ್ರಮ ಹಾಕಿಕೊಂಡಂತಿದೆ. ಸಮಯ, ಸಂದರ್ಭ ಲೆಕ್ಕಿಸದೇ ಎಲ್ಲ ಕಡೆ ಬೈಯುತ್ತ ಹೋಗುತ್ತಿದ್ದಾರೆ. ನಾವು ಮಾತ್ರ ರೈತರ ಸೇವೆ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಅಚಲ ವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ADVERTISEMENT

ಸೆ. 28 ರಂದು ನಡೆಯುವ ಚುನಾವಣೆಯಲ್ಲಿ ‘ದಿ. ಅಪ್ಪಣ್ಣಗೌಡ ಪಾಟೀಲ್ ಸಹಕಾರ ಪೆನಲ್’ಗೆ ಎಲ್ಲ ಸ್ಥಾನಕ್ಕೆ ಅಭ್ಯರ್ಥಿ ಇದ್ದಾರೆ. ಎಲ್ಲ ಅಭ್ಯರ್ಥಿಗಳು ರೈತರ ಸೇವೆ ಮಾಡುವ ಯೋಗ್ಯ ವ್ಯಕ್ತಿಗಳು. ಕಳೆದ ಬಾರಿಯ ಚುನಾವಣೆಯಲ್ಲಿ ನಮ್ಮ ವಿರೋಧಿಗಳಿಗೆ ಆಶೀರ್ವಾದ ಮಾಡಿದಂತೆ ಈ ಸಲ ನಮ್ಮ ಪೆನಲ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು.

ಸಚಿವ ಸತೀಶ್ ಜಾರಕಿಹೊಳಿ ವಿದ್ಯುತ್ ಸಹಕಾರ ಸಂಘದ ಪ್ರಗತಿಗಾಗಿ ಅನೇಕ ಮಾರ್ಗೋಪಾಯ ಹಾಕಿದ್ದಾರೆ. ಸಂಘ ಈಗ ದಿವಾಳಿ ಅಂಚಿನಲ್ಲಿದೆ. ಇದಕ್ಕೀಗ ಕಾಯಕಲ್ಪ ಬೇಕೇಬೇಕು. ಅದು ಸತೀಶ್ ಜಾರಕಿಹೊಳಿ ಅವರಿಂದ ಮಾತ್ರ ಸಾಧ್ಯ ಎಂದರು. ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ಕಾರ್ಯಕರ್ತರು ಬೃಹತ್‌ ಹಾರ ಹಾಕಿ ಗೌರವಿಸಿದರು.

ವೇದಿಕೆಯಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ, ಹೀರಾ ಶುಗರ್ಸ್ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ, ಪೆನಲ್ ಅಭ್ಯರ್ಥಿಗಳಾದ ಶಿವಕುಮಾರ ಮಟಗಾರ, ಅಮರ ನಲವಡೆ, ಅಶೋಕ ಪಟ್ಟಣಶೆಟ್ಟಿ, ಕಿರಣ ಕಲ್ಲಟ್ಟಿ, ಪ್ರಭುದೇವ ಪಾಟೀಲ, ಶಶಿರಾಜ ಪಾಟೀಲ, ಬಸಪ್ಪ ಮರಡಿ, ಬಸಗೌಡ ಮಗೆನ್ನವರ, ಶಂಕರೆಪ್ಪ ಶಿರಕೋಳಿ, ಭಾಗ್ಯಶ್ರೀ ಪಾಟೀಲ, ಸುಮಿತ್ರಾ ಶಿಡ್ಲಿಹಾಳ, ಶಂಕರ ಹೆಗಡೆ, ದಯಾನಂದ ಪಾಟೀಲ, ಲಕ್ಷ್ಮಣ ಹೂಲಿ, ಬಸವರಾಜ ನಾಯಿಕ ಅವರು ಮತಯಾಚಿಸಿದರು. ನಂತರ ಅಣ್ಣಾಸಾಹೇಬ್ ಜೊಲ್ಲೆ ಅಭ್ಯರ್ಥಿಗಳ ಪರ ಮತಯಾಚಿಸಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಪ್ರಚಾರಾರ್ಥವಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಘೋಡಗೇರಿ ಗ್ರಾಮದಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಂಗಳವಾರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.