ADVERTISEMENT

ಅಥಣಿ | ಸೌಕರ್ಯಗಳಿಲ್ಲದೇ ಬಡವಾದ ಬಳವಾಡ

ಶಿರಹಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ನಿರ್ಲಕ್ಷದ ಆರೋಪ: ಜನರಿಗೆ ಇಲ್ಲ ಶುದ್ಧ ನೀರು, ಸಮರ್ಪಕ ವಿದ್ಯುತ್‌

ಪರಶುರಾಮ ನಂದೇಶ್ವರ
Published 16 ಜುಲೈ 2025, 2:54 IST
Last Updated 16 ಜುಲೈ 2025, 2:54 IST
ಅಥಣಿ ತಾಲ್ಲೂಕಿನ ಬಳವಾಡ ಗ್ರಾಮದಲ್ಲಿ ಕಟ್ಟುನಿಂತ ನೀರು ಶುದ್ಧೀಕರಣ ಘಟಕ
ಅಥಣಿ ತಾಲ್ಲೂಕಿನ ಬಳವಾಡ ಗ್ರಾಮದಲ್ಲಿ ಕಟ್ಟುನಿಂತ ನೀರು ಶುದ್ಧೀಕರಣ ಘಟಕ   

ಅಥಣಿ: ತಾಲ್ಲೂಕಿನ ಬಳವಾಡ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಬೀದಿದೀಪ, ಚರಂಡಿ, ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಜನ ಈಗಲೂ ಪರದಾಡುವ ಸ್ಥಿತಿ ಇದೆ.

ಈ ಊರು ಶಿರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿರಹಟ್ಟಿ ಗ್ರಾಮದವಾರಿಗಿದ್ದರಿಂದ ಬಳವಾಡ ಗ್ರಾಮವನ್ನು ಕಡೆಗಣಿಸಿದ್ದಾರೆ ಎನ್ನುವುದು ಗ್ರಾಮಸ್ಥರು ಆರೋಪ. ಶಿರಹಟ್ಟಿ ಪಂಚಾಯಿತಿಗೆ 18 ಸದಸ್ಯರಿದ್ದಾರೆ. ಅದರಲ್ಲಿ ನಾಲ್ವರು ಬಳವಾಡದವರು. ಆದರೂ ಗ್ರಾಮದ ಸಮಸ್ಯೆಗೆ ಧ್ವನಿ ಎತ್ತುವವರು ಇಲ್ಲ ಎಂಬುದು ಜನರ ದೂರು.

ಬೀದಿ ದೀಪಗಳೇ ಇಲ್ಲ: ಒಂದು ತಿಂಗಳಿನಂದ ಗ್ರಾಮದಲ್ಲಿ ಬೀದಿ ದೀಪಗಳೆ ಇಲ್ಲ. ಪ್ರಮುಖ ಬೀದಿಗಳಲ್ಲಿ ಸೇರಿದಂತೆ ಗ್ರಾಮದ ಎಲ್ಲೆಡೆ ಬೀದಿ ದೀಪಗಳಿಲ್ಲದೇ ರಾತ್ರಿ ಜನ ಪರದಾಡುವ ಸ್ಥಿತಿ ಬಂದಿದೆ.

ಕುಡಿಯುವ ನೀರು ಇದ್ದರೂ ಸಮರ್ಪಕ ಪೂರೈಕೆ ಇಲ್ಲ. ಶುದ್ದ ಕುಡಿಯುವ ನೀರಿಗಾಗಿ ಇಲ್ಲಿ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ಇದು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕೆಟ್ಟು ಒಂದು ವರ್ಷವಾಗಿದೆ. ಇಲ್ಲಿಂದ ಯಾರೂ ನೀರು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲವಾಗಿದೆ ಎನ್ನುತ್ತಾರೆ ಮಹಿಳೆಯರು.

ಅವೈಜ್ಞಾನಿಕ ಚರಂಡಿ: ಇತ್ತೀಚೆಗೆ ಪ್ರಮುಖ ಬೀದಿಯಲ್ಲಿ ಚರಂಡಿ ನಿರ್ಮಿಸಲಾಗಿದೆ. ಅದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಎರಡು ಬದಿಯಲ್ಲಿನ ನೀರು ಬಂದು ಮಧ್ಯದಲ್ಲಿ ನಿಂತು ದುರ್ನಾತ ಬರುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಚರಂಡಿ ಸ್ವಚ್ಛತೆ ಮಾಡುವ ಪಂಚಾಯಿತಿ ಸಿಬ್ಬಂದಿ ವೇತನ ಮಾಡದ ಕಾರಣ ಚರಂಡಿ ಸ್ವಚ್ಛತೆ ಮಾಡಿಲ್ಲ.

ಪ್ರಾಥಮಿಕ ಶಾಲೆಯಲ್ಲಿಯೂ ಪ್ರತ್ಯೇಕ ಅಡುಗೆ ಕೋಣೆ ಇಲ್ಲದೆ ಅಡುಗೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಹೊಸ ಕೋಣೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಎರಡು ತಿಂಗಳಾದರೂ ಕಾಮಗಾರಿ ಆರಂಭಿಸಿಲ್ಲ ಎಂದು ಪಾಲಕರು ತಕರಾರು ಮಾಡಿದ್ದಾರೆ.

ಬಳವಾಡ ಅಭಿವೃದ್ಧಿಗೆ ಆಗ್ರಹಿಸಿದರೂ ಪಂಚಾಯತಿ ಅಧ್ಯಕ್ಷ ಪಿಡಿಒ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳ ಮಾತಿಗೇ ಬೆಲೆ ಇಲ್ಲವಾಗಿದೆ
-ಮಾಹಾದೇವ ಮಾದರ ಸದಸ್ಯ ಬಳವಾಡ
ಕುರಿಯುವ ನೀರಿನ ಶುದ್ಧೀಕರಣ ಘಟಕ ಬಂದ್‌ ಬಿದ್ದು ವರ್ಷವೇ ಕಳೆದಿದೆ. ಆದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ
-ಸಿದ್ದರಾಮ ಸವದಿ ಬಳವಾಡ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.