
ಬೆಳಗಾವಿ: ‘ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ 9 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 7 ಸ್ಥಾನಗಳಿಗೆ ಭಾನುವಾರ (ಅ.19) ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ನಗರದ ಬಿ.ಕೆ. ಮಾಡೆಲ್ ಹೈಸ್ಕೂಲ್‌ನಲ್ಲಿ ಮತದಾನ ಡೆಯಲಿದೆ. ಒಟ್ಟು 676 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಬಿಡಿಸಿಸಿ ಬ್ಯಾಂಕ್ ಚುನಾವಣಾಧಿಕಾರಿ ಶ್ರವಣ ನಾಯಕ್ ಹೇಳಿದರು.
‘ಒಂದೇ ದಿನದಲ್ಲಿ ಇಡೀ ಚುನಾವಣಾ ಪ್ರಕ್ರಿಯೆ ಮುಗಿಯಲಿದೆ. ಮತದಾನ ಮುಗಿದ ಬಳಿಕ, ಮತ ಎಣಿಕೆ ಪ್ರಕ್ರಿಯೆ ನಡೆಸಿ, ಫಲಿತಾಂಶ ಕೂಡ ಪ್ರಕಟಿಸಲಾಗುವುದು’ ಎಂದು ಅವರು ಬ್ಯಾಂಕಿನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಏಳು ಸ್ಥಾನಗಳಿಗೆ 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಮತದಾನಕ್ಕಾಗಿ ಏಳು ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಕೇಂದ್ರಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಮತದಾನದ ಕೇಂದ್ರದ ಹೊರಗೆ ಹಾಗೂ ಒಳಗೆ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.
‘ಮತಗಟ್ಟೆಯಲ್ಲಿ ಮೊಬೈಲ್, ಪೆನ್ನು, ಪೆನ್ಸಿಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಮಗ್ರಿಗಳ ಬಳಕೆ ನಿಷೇಧಿಸಲಾಗಿದೆ. 33 ಚುನಾವಣಾ ಸಿಬ್ಬಂದಿ, ಏಜೆಂಟರು ಹಾಗೂ ಅಧಿಕೃತ ಪಾಸ್ ಪಡೆದ ಮಾಧ್ಯಮದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತದಾರರು ಅಲ್ಲದಿರುವ ಹಾಲಿ, ಮಾಜಿ ಸಚಿವರು, ಶಾಸಕರಿಗೆ ಮತದಾನ ಕೇಂದ್ರಕ್ಕೆ ಪ್ರವೇಶ ಇಲ್ಲ ಮತದಾನ ಹಾಗೂ ಮತ ಎಣಿಕೆ ಪ್ರಕ್ರಿಯೆಗೆ ಎಲ್ಲ ಅಭ್ಯರ್ಥಿಗಳಿಗೂ ತಲಾ ಒಬ್ಬರೇ ಏಜೆಂಟರು ಇರಬೇಕು. ಅಭ್ಯರ್ಥಿಗಳು, ಚುನಾವಣೆ ಅಧಿಕಾರಿಗಳು ಹಾಗೂ ಮಾಧ್ಯಮದವರು ಸೇರಿದಂತೆ ಒಳಗಿರುವ ಎಲ್ಲರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ’ ಎಂದರು.
‘ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ ವೇದಿಕೆಯ ಸಿಬ್ಬಂದಿ, ಅಂಬುಲೆನ್ಸ್, ಅಗ್ನಿಶಾಮಕ ದಳದ ವ್ಯವಸ್ಥೆಯು ಇರಲಿದೆ. ಮತದಾನದ ಕೇಂದ್ರ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು’ ಎಂದು ಅವರು ಹೇಳಿದರು.
‘ಮತದಾರರು ಗೌಪ್ಯತೆಯಿಂದ ಮತದಾನ ಮಾಡಬೇಕು. ಗೌಪ್ಯತೆ ಉಲ್ಲಂಘನೆಯಾಗುವ ಯಾವುದೇ ಕಾರ್ಯ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ. ಎಲ್ಲ ಮತದಾರರೂ ಇದಕ್ಕೆ ಸಹಕರಿಸಬೇಕು’ ಎಂದೂ ಕೋರಿದರು.
‘ಈಗಾಗಲೇ ಮತದಾನ ನಡೆಯು ಬಿ.ಕೆ.ಮಾಡಲ್ ಪ್ರೌಢ ಶಾಲೆಯ ಸುತ್ತಮುತ್ತ 100 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅಭ್ಯರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಗೆಲುವು ಸಾಧಿಸಿದ ಅಭ್ಯರ್ಥಿ ಹಾಗೂ ಐವರು ಬೆಂಬಲಿಗರು ಸಮೇತ ಬಂದು ಪ್ರಮಾಣ ಪತ್ರ ತೆಗೆದುಕೊಂಡು ಹೋಗಬಹುದು’ ಎಂದು ಹೇಳಿದರು.
‘ನ್ಯಾಯಾಲಯದ ಆದೇಶ ಬಂದಿಲ್ಲ’
‘ಚುನಾವಣೆ ನಡೆಯಬೇಕಿರುವ 7 ಕ್ಷೇತ್ರಗಳಲ್ಲಿ 698 ಪಿಕೆಪಿಎಸ್‌ಗಳಿವೆ. ಕೆಲವು ಪಿಕೆಪಿಎಸ್ ಮತದಾನದ ಹಕ್ಕು ಕಳೆದುಕೊಂಡಿವೆ. ಠರಾವು ಪಾಸ್ ಮಾಡಿಕೊಂಡು ಮತದಾನದ ಹಕ್ಕು ಪಡೆದ ಒಟ್ಟು 676 ಮತದಾರರು ಮತದಾನ ಮಾಡಲಿದ್ದಾರೆ. ಕೆಲವು ಪಿಕೆಪಿಎಸ್‌ಗಳು ಮತದಾನದ ಹಕ್ಕು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಆದರೆ ನ್ಯಾಯಾಲಯದಿಂದ ನಮಗೆ ಈವರೆಗೂ ಯಾವುದೇ ನಿರ್ದೇಶನ ಬಂದಿಲ್ಲ’ ಎಂದು ಚುನಾವಣಾಧಿಕಾರಿ ತಿಳಿಸಿದರು. ‘ಒಂದು ವೇಳೆ ಕೋರ್ಟ್ ನಿರ್ದೇಶನ ಬಂದರೂ ಆದೇಶವನ್ನು ಪಾಲಿಸಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.