ಸತೀಶ ಜಾರಕಿಹೊಳಿ
ಬೆಳಗಾವಿ: ‘ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧ ಮಾಡಿದರೆ, ಕನ್ನಡ–ಮರಾಠಿ ಭಾಷಾ ಸಮಸ್ಯೆ ಬಗೆಹರಿಯುವುದಿಲ್ಲ. ನಾಳೆ ಮತ್ತೊಂದು ಸಂಘಟನೆ ಹೆಸರಿನಲ್ಲಿ ಅವರು ಪ್ರತಿಭಟನೆ ನಡೆಸುತ್ತಾರೆ. ನಿಷೇಧವೇ ಇದಕ್ಕೆ ಪರಿಹಾರವಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈಗ ಎಂಇಎಸ್ ಅಸ್ತಿತ್ವದಲ್ಲೇ ಇಲ್ಲ. ಹೀಗಿರುವಾಗ ಅದಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ. ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಮುಗಿದು ಹೋದ ಅಧ್ಯಾಯವಾಗಿದ್ದು, ಕನ್ನಡ–ಮರಾಠಿ ಭಾಷಾ ಸಮಸ್ಯೆ ಐದು ದಶಕಗಳ ಹಿಂದಿನಷ್ಟು ಈಗ ಬೆಳಗಾವಿಯಲ್ಲಿ ತೀವ್ರವಾಗಿಲ್ಲ. ಮರಾಠಿ ಭಾಷಿಕರೂ ರಾಜ್ಯದಲ್ಲಿ ಮುಖ್ಯವಾಹಿನಿಗೆ ಬರುತ್ತಿದ್ದಾರೆ’ ಎಂದರು.
ಕರ್ನಾಟಕದಲ್ಲಿನ ಮರಾಠಿ ಮಾಧ್ಯಮ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶ ಮತ್ತು ಉದ್ಯೋಗಗಳನ್ನು ನೀಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿರುವ ಕುರಿತ ಪ್ರಶ್ನೆಗೆ, ‘ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಡಳಿತ ಪರಿಶೀಲಿಸಲಿದೆ. ಆಯಾ ರಾಜ್ಯ ಸರ್ಕಾರಗಳಿಗೆ ತಮ್ಮ ರಾಜ್ಯದ ಜನರಿಗೆ ಉದ್ಯೋಗ ಒದಗಿಸುವುದು ಕಷ್ಟಕರವಾಗಿದೆ. ಹೀಗಿರುವಾಗ ಹೊರಗಿನವರಿಗೆ ಉದ್ಯೋಗ ನೀಡುವುದು ಇನ್ನೂ ಕಷ್ಟಕರ’ ಎಂದರು.
‘ಕರ್ನಾಟಕ ಬಂದ್ ಆಚರಣೆಗೆ ನಮ್ಮ ವಿರೋಧವಿಲ್ಲ. ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೆ ಹಕ್ಕಿದೆ. ಆದರೆ, ಜನರಿಗೆ ಇದರಿಂದ ಯಾವ ತೊಂದರೆ ಆಗಬಾರದು ಎಂಬುದು ನಮ್ಮ ಕಳಕಳಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಾಮಗಾರಿಯನ್ನು ಹಂತ–ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.