ಬೆಳಗಾವಿ: ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ರಾಜ್ಯ ಸರ್ಕಾರ ಘೋಷಿಸಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಬಸವ ಸಂಸ್ಕೃತಿ ಅಭಿಯಾನ’ದ ಮೆರವಣಿಗೆ ಸಂಭ್ರಮದಿಂದ ನೆರವೇರಿತು.
ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭೆ, ಶರಣ ಸಾಹಿತ್ಯ ಪರಿಷತ್, ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಡೆದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಬಸವ ಭಕ್ತರು ಸೇರಿದ್ದರು. ಬೆಳಗಾವಿ ಮಾತ್ರವಲ್ಲದೆ; ವಿವಿಧೆಡೆಯಿಂದ ಸಾವಿರಾರು ಜನರ ದಂಡು ಹರಿದುಬಂದಿತ್ತು.
ಲಿಂಗರಾಜ ಕಾಲೇಜು ಮೈದಾನದಿಂದ ಆರಂಭಗೊಂಡ ಮೆರವಣಿಗೆ ಕಾಲೇಜು ರಸ್ತೆ, ರಾಣಿ ಚನ್ನಮ್ಮನ ವೃತ್ತ, ಅಂಬೇಡ್ಕರ್ ರಸ್ತೆ, ಶ್ರೀಕೃಷ್ಣದೇವರಾಯ ವೃತ್ತ ಮಾರ್ಗವಾಗಿ ಸಾಗಿ, ಶಿವಬಸವ ನಗರದ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆವರಣ ತಲುಪಿತು.
ಮೆರವಣಿಗೆಯುದ್ದಕ್ಕೂ ಬಸವಣ್ಣನ ಪರ ಜೈಕಾರಗಳು ಮಾರ್ದನಿಸಿದವು. ‘ಜೈ ಬಸವೇಶ’ ಎಂಬ ಜೈಕಾರ ಮುಗಿಲು ಮುಟ್ಟಿತ್ತು. ಶರಣೆಯರು ವಚನದ ಕಟ್ಟುಗಳನ್ನು ಹೊತ್ತು ಸಾಗಿದರು. ಬಸವ ಧ್ವಜಗಳು ರಾರಾಜಿಸಿದವು.
ರಾಣಿ ಚನ್ನಮ್ಮನ ವೇಷಧಾರಿಗಳು ಕುದುರೆ ಮೇಲೆ ಹತ್ತಿ ಮೆರವಣಿಗೆಯುದ್ದಕ್ಕೂ ಗಮನಸೆಳೆದರು. ಇಡೀ ನಗರದಲ್ಲಿ ಬಸವ ತತ್ವ ಅಭಿಯಾನ ಅನುರಣಿಸಿತು.
ಶರಣರ ವೇಷಗಳಲ್ಲಿದ್ದ ಪುಟಾಣಿಗಳು ಮೆರವಣಿಗೆಗೆ ಮೆರುಗು ತಂದರು. ‘ಬಸವ ರಥ’ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.
ವಿವಿಧ ಜಿಲ್ಲೆಗಳ ಮಠಗಳ ಮಠಾಧೀಶರು, ಶರಣರು–ಶರಣೆಯರು ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.