ADVERTISEMENT

ಬೆಳಗಾವಿ: ಬಸವ ಸಂಸ್ಕೃತಿ ಅಭಿಯಾನದ ಟೀಕೆ ಸಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 4:00 IST
Last Updated 9 ಡಿಸೆಂಬರ್ 2025, 4:00 IST
ಬೆಳಗಾವಿಯಲ್ಲಿ ಸೋಮವಾರ ನಡೆದ ಶಿವಬಸವ ಸ್ವಾಮೀಜಿ ಅವರ ಜಯಂತಿ ಕಾರ್ಯಕ್ರಮದ ಅಂಗವಾಗಿ, ಸಾಧನೆ ತೋರಿದ ವಿದ್ಯಾರ್ಥಿನಿಯರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಸನ್ಮಾನಿಸಿದರು
ಬೆಳಗಾವಿಯಲ್ಲಿ ಸೋಮವಾರ ನಡೆದ ಶಿವಬಸವ ಸ್ವಾಮೀಜಿ ಅವರ ಜಯಂತಿ ಕಾರ್ಯಕ್ರಮದ ಅಂಗವಾಗಿ, ಸಾಧನೆ ತೋರಿದ ವಿದ್ಯಾರ್ಥಿನಿಯರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಸನ್ಮಾನಿಸಿದರು   

ಬೆಳಗಾವಿ: ‘ರಾಜ್ಯದಾದ್ಯಂತ ಈಚೆಗೆ ಬಸವ ಸಂಸ್ಕೃತಿ ಅಭಿಯಾನ ಬಹಳ ಸಂಭ್ರಮದಿಂದ ನಡೆಯಿತು. ಆದರೆ, ಕೆಲವು ಮಠಾಧೀಶರೇ ಅದರ ಬಗ್ಗೆ ಕೆಟ್ಟ ‘ಕಮೆಂಟ್‌’ ಮಾಡಿದ್ದು ಬೇಸರದ ಸಂಗತಿ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಇಲ್ಲಿನ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದಲ್ಲಿ ಸೋಮವಾರ ನಡೆದ, ಶಿವಬಸವ ಸ್ವಾಮಿಗಳ 136ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಸಮಾಜ ಯಾವ ಕಡೆಗೆ ಸಾಗುತ್ತಿದೆ ಎಂಬುದನ್ನು ನಾವು ನೋಡಬೇಕಾಗಿದೆ. ಜಾತ್ಯತೀತ ನಿಲುವಿನ ಮೇಲೆ ನಾವು ನಿಲ್ಲಬೇಕು. ಧರ್ಮದಿಂದ ಜೀವನ ನಡೆಸಬೇಕು’ ಎಂದರು.

‘ನಮ್ಮ ಮಠಗಳು ಸರ್ಕಾರಕ್ಕೆ ಸಮಾನವಾಗಿ ಸಾಮಾಜಿಕ ಕೆಲಸ ಮಾಡುತ್ತಿವೆ. ಅಕ್ಷರ ದಾಸೋಹ, ಅನ್ನ, ಆರೋಗ್ಯ ದಾಸೋಹಗಳನ್ನು ಸರ್ಕಾರಗಳೇ ಕಾಪಿ ಮಾಡುತ್ತಿವೆ. ಮಠಗಳ ಕೆಲಸವೇ ಸರ್ಕಾರಕ್ಕೆ ಸ್ಫೂರ್ತಿ’ ಎಂದರು.

ADVERTISEMENT

‘ನಾಗನೂರು ಮಠದ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ನಾವು ಸಾಗುತ್ತಿದ್ದೇವೆ‌. ಕರ್ನಾಟಕ ಏಕೀಕರಣಕ್ಕೆ ಅವರ ಕೊಡುಗೆ ಅಪಾರ, ಸ್ವಾತಂತ್ರ್ಯ ಹೋರಾಟದಲ್ಲೂ ಅವರ ಶ್ರಮ ಸಾಕಷ್ಟಿದೆ’ ಎಂದು ಹೇಳಿದರು.

ಲಕ್ಷ್ಮೀ ಅವರನ್ನು ಮಠಾಧೀಶರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಗದಗ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬೆಟ್ಟದಪುರದ ಸಲೀಲಾಖ್ಯ ವಿರಕ್ತಮಠದ ಚನ್ನಬಸವ ದೇಶಿಕೇಂದ್ರ ಸ್ವಾಮಿಗಳು, ಅಲ್ಲಮಪ್ರಭು ಸ್ವಾಮಿಗಳು, ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಎಫ್.ಪಿ.ಡಬ್ಲ್ಯೂ ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕರಾದ ಬಸನಗೌಡ ಪಾಟೀಲ, ವಿಟಿಯು ಕುಲ ಸಚಿವ ಪ್ರಸಾದ್ ರಾಂಪೂರೆ, ಸೇವಾರತ್ನ ಪ್ರಶಸ್ತಿ ಪುರಸ್ಕೃತರಾದ ಬಸಲಿಂಗಣ್ಣ ವಣ್ಣೂರ, ಕಾವೇರಿ ಕಿಲಾರಿ, ಬಾಳಪ್ಪ ದೊಡ್ಡಬಂಗಿ, ಚನ್ನಪ್ಪ ನರಸಣ್ಣವರ ಅವರನ್ನು ಸನ್ಮಾನಿಸಲಾಯಿತು.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ‘ಯುವವಿಜ್ಞಾನಿ ಕೇಂದ್ರ (STEAM-H)ದ ವಿದ್ಯಾರ್ಥಿಗಳು ಸಿದ್ಧಪಡಿಸಿದ ರೋಬಾಟ್‌ ಅನ್ನು ಸಚಿವ ಎಂ.ಬಿ. ಪಾಟೀಲ ಕೌತುಕದಿಂದ ವೀಕ್ಷಿಸಿದರು

Cut-off box - ‘ಯುವ ವಿಜ್ಞಾನಿ’ ಕೇಂದ್ರಕ್ಕೆ ಚಾಲನೆ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಹಾಗೂ ತರಬೇತಿ ನೀಡಲು ನಿರ್ಮಿಸಿರುವ ‘ಯುವವಿಜ್ಞಾನಿ ಕೇಂದ್ರ (STEAM-H) ಅನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ‘ಇಂಥ ಯುವ ವಿಜ್ಞಾನ ಕೇಂದ್ರವು ಪ್ರತಿ ಜಿಲ್ಲೆಗೆ ಒಂದಾದರೂ ಇರಬೇಕು. ಇಲ್ಲಿನ ವಿದ್ಯಾರ್ಥಿಗಳೇ ಒಂದು ರೊಬಾಟ್‌ ತಯಾರಿಸಿದ್ದಾರೆ. ಇದು ರಾಜ್ಯದಲ್ಲಿ ಎಲ್ಲೂ ನಡೆದಿಲ್ಲ. ಕೈಗಾರಿಕಾ ಇಲಾಖೆಯಿಂದ ಇದಕ್ಕೆ ಪುಷ್ಠಿ ನೀಡಿ ರಾಜ್ಯದಾದ್ಯಂತ ತೆರೆಯಲು ಸಾಧ್ಯವೇ ಚರ್ಚಿಸುತ್ತೇನೆ’ ಎಂದು ಅವರು ಹೇಳಿದರು. ‘ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಶಿವಬಸವ ಶ್ರೀಗಳ ಹೆಸರು ಹಾಗೂ ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಸಿದ್ಧೇಶ್ವರ ಶ್ರೀಗಳ ಹೆಸರು ಇಡಲು ಕೇಂದ್ರಕ್ಕೆ ಶಿಪ್ಪಾರಸು ಮಾಡಲಾಗಿದೆ’ ಎಂದರು. ‘ದಾಸೋಹದಲ್ಲಿ ನಂಬಿಕೆ ಇಟ್ಟಿರುವ ಮಠವು ಈಗ ಆಧುನಿಕ ಜ್ಞಾನಶಾಖೆಗಳ ಕಡೆಗೆ ಗಮನ ಹರಿಸಿರುವುದು ಸ್ವಾಗತಾರ್ಹ. ನಮ್ಮ ಯುವಜನರು ಇಂತಹ ಧಾರೆಗಳಿಗೆ ತೆರೆದುಕೊಳ್ಳುವುದು ಅಗತ್ಯ. ಇದಕ್ಕೆ ನಾಗನೂರು ರುದ್ರಾಕ್ಷಿ ಮಠವು ಮುಂದಾಗಿ ಈ ಕೇಂದ್ರವನ್ನು ಆರಂಭಿಸಿರುವುದು ಹೊಸ ಅಧ್ಯಾಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.