ರಾಮದುರ್ಗ: ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ವ್ಯವಸ್ಥಿತವಾಗಿ ತುಳಿಯುವ ಹುನ್ನಾರ ನಡೆದಿದೆ. ಶ್ರೀಗಳ ಜೊತೆಗೆ ಇಡೀ ಪಂಚಮಸಾಲಿ ಸಮಾಜ ನಿಲ್ಲಲಿದೆ. ಶ್ರೀಗಳು ಪೀಠ ತೊರೆಯುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಪಿರೋಜಿ ಹೇಳಿದರು.
ಪಟ್ಟಣದ ತುರನೂರ ಸಮೀಪದ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಲಿಂಗಾಯತ ಪಂಚಮಸಾಲಿ ಸಮಾಜದ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ಹೆಸರು ಹೇಳಿಕೊಂಡು ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಪಕ್ಷಾತೀತವಾಗಿ ಹೋರಾಟಕ್ಕೆ ಮುಂದಾಗಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ಶಪಥ ಮಾಡಿದರು.
ನ್ಯಾಯಯುತವಾಗಿ ಪಂಚಮಸಾಲಿ ಬಡ ಮಕ್ಕಳ ವ್ಯಾಸಂಗ ಹಾಗೂ ಸರ್ಕಾರಿ ಸೇವೆ ಪಡೆಯುವ ಮೀಸಲಾತಿಗೆ ನಡೆಯುತ್ತಿರುವ ಹೋರಾಟಕ್ಕೆ ರಾಮದುರ್ಗ ತಾಲ್ಲೂಕಿನ ಸಮಾಜ ಬಾಂಧವರು ಬೆಂಬಲಿಸಬೇಕು ಎಂದು ಹೇಳಿದರು.
ವಕೀಲ ಎಫ್.ಎಸ್. ಸಿದ್ದನಗೌಡರ ಮಾತನಾಡಿ, ಕೊಡುಗೆ ದಾನಿಯಾಗಿರುವ ಪಂಚಮಸಾಲಿ ಸಮಾಜದವನ್ನು ತುಳಿದು ಕೆಲ ರಾಜಕಾರಣಿಗಳು ಬೇಳೆ ಬೇಯಿಸಿಕೊಂಡಿದ್ದಾರೆ. ಸಮಾಜ ಬಾಂಧವರು ಸೂಕ್ಷ್ಮವಾಗಿ ಗಮನಿಸಿ ಅಂತವರಿಗೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜದ ತಾಲ್ಲೂಕು ಅಧ್ಯಕ್ಷ ಸಿ.ಬಿ. ಪಾಟೀಲ ಮಾತನಾಡಿ, ಮಕ್ಕಳ ವ್ಯಾಸಂಗ ಹಾಗೂ ಸರ್ಕಾರಿ ಸೌಲಭ್ಯ ಪಡೆಯಲು ಮೀಸಲಾತಿ ಅಗತ್ಯವಿದೆ. ಮೀಸಲಾತಿ ಪಡೆಯುವ ಹೋರಾಟದ ಜೊತೆಗೆ ಸಮಾಜ ಸಂಘಟನೆಗೆ ತಾಲ್ಲೂಕಿನ ಸಮಾಜ ಬಾಂಧವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸುವುದಾಗಿ ಭರವಸೆ ನೀಡಿದರು.
ಸವದತ್ತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಾನಂದ ಹಾಲೊಳ್ಳಿ ಉಪನ್ಯಾಸ ನೀಡಿದರು. ಸಮಾಜದ ಟ್ರಸ್ಟ್ ಕಾರ್ಯದರ್ಶಿ ಎನ್.ಬಿ. ದಂಡಿನದುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು, ವೈದ್ಯಕೀಯ ವ್ಯಾಸಂಗಕ್ಕೆ ಮತ್ತು ನವೋದಯ ವಸತಿ ಶಾಲೆಗೆ ಆಯ್ಕೆಯಾದವರನ್ನು ಸತ್ಕರಿಸಲಾಯಿತು.
ವೀರರಾಣಿ ಚೆನ್ನಮ್ಮ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಭೀಮಪ್ಪ ಬಸಿಡೋಣಿ, ಸಮಾಜದ ಮುಖಂಡ ವೈ.ಎಚ್. ಪಾಟೀಲ, ಪಿ.ಎಫ್. ಪಾಟೀಲ, ಪರುತಗೌಡ ಪಾಟೀಲ, ಎನ್.ಎನ್. ದೇಸಾಯಿ, ಸಂಗನಗೌಡ ಪಾಟೀಲ, ಮಾರುತಿ ಕೊಪ್ಪದ, ಬಾಳಪ್ಪ ಹಂಜಿ, ಬಿ.ಎಸ್. ಬೆಳವಣಕಿ, ಡಾ.ಬಿ.ಎನ್. ಮಾದನ್ನವರ, ಚನ್ನಪ್ಪ ನವಲಗುಂದ, ಜಿ.ವಿ. ನಾಡಗೌಡ್ರ, ಐ.ವೈ. ಪವಾಡಿಗೌಡ್ರ, ಸಿದ್ದನಗೌಡ ಧನರನಗೌಡ್ರ, ಬಿ.ಎಸ್. ಪಾಟೀಲ, ನಿಂಗನಗೌಡ ಪಾಟೀಲ, ಬಸವರಾಜ ಕೊಪ್ಪದ, ಬಸನಗೌಡ ದ್ಯಾಮನಗೌಡ್ರ ಸೇರಿದಂತೆ ಇತರರು ಇದ್ದರು.
ಗೌಡಪ್ಪಗೌಡ ಪಾಟೀಲ ಸ್ವಾಗತಿಸಿದರು. ಶಿವಾನಂದ ಹವಾಲ್ದಾರ ಕಾರ್ಯಕ್ರಮ ನಿರೂಪಿಸಿದರು. ಮಂಜು ನವಲಗುಂದ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.