ADVERTISEMENT

ಬಸವಣ್ಣನವರು ಲಿಂಗಾಯತ ಪದ ಬಳಸಿಲ್ಲ: ಪಂಡಿತಾರಾಧ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 2:30 IST
Last Updated 30 ಅಕ್ಟೋಬರ್ 2025, 2:30 IST
ರಾಮದುರ್ಗ ತಾಲ್ಲೂಕಿನ ಮುದಕವಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶ್ರೀಶೈಲ  ಚನ್ನಸಿದ್ದರಾಮ ಸ್ವಾಮೀಜಿ ಅವರನ್ನು ಭಕ್ತರು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಬರಮಾಡಿಕೊಂಡರು.
ರಾಮದುರ್ಗ ತಾಲ್ಲೂಕಿನ ಮುದಕವಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶ್ರೀಶೈಲ  ಚನ್ನಸಿದ್ದರಾಮ ಸ್ವಾಮೀಜಿ ಅವರನ್ನು ಭಕ್ತರು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಬರಮಾಡಿಕೊಂಡರು.   

ರಾಮದುರ್ಗ: ಸಮಾನತೆಯ ಜಾಗೃತಿ ಮೂಡಿಸಿದ ಬಸವಣ್ಣನವರು ತಮ್ಮ ವಚನದಲ್ಲಿ ಲಿಂಗಾಯತ ಪದ ಬಳಕೆ ಮಾಡಿಲ್ಲ ಎಂದು ಶ್ರೀಶೈಲ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು. 

ತಾಲ್ಲೂಕಿನ ಮುದಕವಿ ಗ್ರಾಮದ ಶ್ರೀ ವೀರಭದ್ರೇಶ್ವರ ಹಾಗೂ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಮತ್ತು ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. 

ವೀರಶೈವಕ್ಕೂ ಲಿಂಗಾಯತಕ್ಕೂ ಸಂಬಂಧವಿಲ್ಲ. ಎರಡು ಬೇರೆ ಬೇರೆ ಎನ್ನುವ ಅರ್ಥಹೀನ ಪ್ರಚಾರ ಮಾಡುತ್ತಿರುವುದು ಸರಿಯಲ್ಲ. ವೀರಶೈವ ಲಿಂಗಾಯತ ಎರಡು ಒಂದೇ. ಕೆಲವು ಮಠಾಧೀಶರು ಮಾತ್ರ ಪ್ರತ್ಯೇಕ ಗುಂಪಿನಲ್ಲಿದ್ದಾರೆ ಎಂದು ಹೇಳಿದರು.

ADVERTISEMENT

ಲಿಂಗಾಯತ ಧರ್ಮ ಬೇರೆ ಎಂಬುದು ಸುಮಾರು 20 ವರ್ಷಗಳಿಂದ ಹುಟ್ಟಿಕೊಂಡಿರುವ ಕೂಸು. ಅದಕ್ಕೆ ಭವಿಷ್ಯವಿಲ್ಲ. ಪತ್ಯೇಕ ಎನ್ನುವವರ ಹಿಂದಿನ ಇತಿಹಾಸ ಗಮನಿಸಿದರೆ ಅವರ ಹಿಂದಿನ ದಾಖಲೆಗಳೇ ವೀರಶೈವ ಲಿಂಗಾಯತ ಎಂದು ಇವೆ. ಅದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಕುಟುಕಿದರು.

ವೃತ್ತಿ ಆಧಾರಿತವಾಗಿ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಳು ಮೀಸಲಾತಿ ಪಡೆದುಕೊಳ್ಳಲು ಹೋರಾಟ ಮಾಡಿ ತಮ್ಮ ಹಕ್ಕು ಪಡೆದುಕೊಳ್ಳಲಿ. ಆದರೆ ರಾಜಕೀಯ, ಧರ್ಮದ ವಿಚಾರ ಬಂದಾಗ ವೀರಶೈವ ಲಿಂಗಾಯತರು ಎಲ್ಲರೂ ಒಂದು ಎಂಬುದು ಸತ್ಯ ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಲ್ಲಣ್ಣ ಯಾದವಾಡ ಮಾತನಾಡಿ, ಧರ್ಮ ಜಾಗೃತಿಗಾಗಿ ಪಂಚಪೀಠಗಳು ಶ್ರಮಿಸುತ್ತಿವೆ.ಗುರುಗಳ ಮಾರ್ಗದರ್ಶನದಲ್ಲಿ ನಿಶ್ಚಿತ ಗುರಿಯೊಂದಿಗೆ ಯುವ ಪೀಳಿಗೆ ತಮ್ಮ ಬದುಕು ಕಟ್ಟಿಕೊಳ್ಳಬೇಕು. ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಮಾರ್ಗದರ್ಶನ ಮಾಡಬೇಕು ಎಂದರು.

ಕೆರೂರಿನ ಡಾ. ಶಿವಕುಮಾರ ಸ್ವಾಮೀಜಿ, ಎಂ.ಆರ್. ಪಾಟೀಲ, ಚಂದ್ರಶೇಖರಪ್ಪ ಹಳ್ಳೂರ ಸೇರಿದಂತೆ ಇತರರು ಮಾತನಾಡಿದರು.

ಮುಳ್ಳೂರ ಅನ್ನದಾನೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಿಲ್ಲಾತೊರಗಲ್ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ರಾಮದುರ್ಗ ಶಿವಮೂರ್ತೇಶ್ವರ ಮಠದ ಶಾಂತವೀರ ಸ್ವಾಮೀಜಿ, ಕಟಕೋಳ-ಮುದಕವಿ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ, ತೊಂಡಿಕಟ್ಟಿ ಅವಧೂತ ಗಾಳೇಶ್ವರ ಮಠದ ಅಭಿನವ ವೆಂಕಟೇಶ ಮಹಾರಾಜರು, ಕರಿಬಸವ ಶಿವಯೋಗಿ ಸ್ವಾಮೀಜಿ, ಬಿ.ಎನ್. ದಳವಾಯಿ, ವೀರಭದ್ರಪ್ಪ ಮುದ್ನೂರ, ಮಲ್ಲಿಕಾರ್ಜನ ಮುದ್ನೂರ  ಇದ್ದರು.

ಅಡ್ಡ ಫಲ್ಲಕ್ಕಿ ಉತ್ಸವ: ಶ್ರೀಶೈಲ ಜಗದ್ಗುರುಗಳು ಗ್ರಾಮ ಪ್ರವೇಶ ಮಾಡುತ್ತಿದ್ದಂತೆ ಸುಮಂಗಲೆಯರ ಆರತಿ, ಕುಂಭಮೇಳ, ವೀರಗಾಸೆ, ಗುಗ್ಗಳ ಸಮೇತ ಅಡ್ಡಪಲ್ಲಕ್ಕಿ ಉತ್ಸವ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.