ADVERTISEMENT

ಮುಖ್ಯಮಂತ್ರಿ ಬೊಮ್ಮಾಯಿ ರಾಜೀನಾಮೆಗೆ ಶಾರದಾ ಗೋಪಾಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 10:02 IST
Last Updated 18 ಅಕ್ಟೋಬರ್ 2021, 10:02 IST
ಶಾರದಾ ಗೋಪಾಲ
ಶಾರದಾ ಗೋಪಾಲ   

ಬೆಳಗಾವಿ: ‘ಮತೀಯ ಗೂಂಡಾಗಿರಿ ಕುರಿತು ‘ಕ್ರಿಯೆ ನಡೆದಾಗ ಪ್ರತಿಕ್ರಿಯೆ ಬರುವುದು ಸಹಜ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿರುವುದು ಅತ್ಯಂತ ಕಳವಳಕಾರಿಯಾಗಿದೆ. ಸಂವಿಧಾನ ವಿರೋಧಿಯಾಗಿದೆ’ ಎಂದು ಜಾಗೃತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾರದಾ ಗೋಪಾಲ ಖಂಡಿಸಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿಯ ಹೇಳಿಕೆಯು ಮತೀಯ ಗೂಂಡಾಗಿರಿ ನಡೆಸುವವರಿಗೆ ಪ್ರಚೋದನೆ ಕೊಟ್ಟಂತಾಗಿದೆ. ಅವರು ಸಂವಿಧಾನ ರಕ್ಷಣೆ ಮಾಡಬೇಕು ಇಲ್ಲವೇ ತಕ್ಷಣವೇ ಹುದ್ದೆಗೆ ರಾಜೀನಾಮೆ ಕೊಟ್ಟು ಕೆಳಗಿಳಿಯಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಹೇಳಿಕೆ ತೀವ್ರ ಖಂಡನೀಯ. ಕೋವಿಡ್, ಲಾಕ್‌ಡೌನ್‌ ಮೊದಲಾದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ಪರಿಹಾರ ಕಲ್ಪಿಸುವುದಕ್ಕೆ ಆದ್ಯತೆ ಕೊಡುವ ಬದಲಿಗೆ ಕೋಮುಗಲಭೆಗಳಿಗೆ ಪ್ರಚೋದನೆ ನೀಡುವ ಮಾತಗಳನ್ನಾಡಿರುವುದು ಸರಿಯಲ್ಲ. ನೈತಿಕ ಪೊಲೀಸ್ ಹೆಸರಲ್ಲಿ ಅನೈತಿಕ ಗೂಂಡಾಗಿರಿ ನಡೆಸುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಇದನ್ನು ನಾವು ಖಂಡಿಸುತ್ತೇವೆ. ಮತಾಂತರಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ರಸ್ತೆ ತಡೆ ನಡೆಸಿ ಜನರಿಗೆ ತೊಂದರೆ ಕೊಟ್ಟಿದ್ದಾರೆ. ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಹೊರಟಿದೆ?’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.