ADVERTISEMENT

ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಸಮಸ್ಯೆ

ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಗರಿಮೆ, ಶೈಕ್ಷಣಿಕ ಹಿರಿಮೆ ಹೊಂದಿದ ಊರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 19:30 IST
Last Updated 13 ಸೆಪ್ಟೆಂಬರ್ 2022, 19:30 IST
ಬೈಲಹೊಂಗಲ ಸಮೀಪದ ಇಂಚಲ ಗ್ರಾಮದ ಬಸವೇಶ್ವರ ನಗರ ಮುಖ್ಯ ರಸ್ತೆಯ ಸ್ಥಿತಿ
ಬೈಲಹೊಂಗಲ ಸಮೀಪದ ಇಂಚಲ ಗ್ರಾಮದ ಬಸವೇಶ್ವರ ನಗರ ಮುಖ್ಯ ರಸ್ತೆಯ ಸ್ಥಿತಿ   

ಬೈಲಹೊಂಗಲ: ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೆಯಾದ ಕೊಡುಗೆ ನೀಡುವಲ್ಲಿ ಜಿಲ್ಲೆಯಲ್ಲಿ ಹೆಸರು ಮಾಡಿದ ಊರು ಇಂಚಲ. ಆದರೆ, ಮೂಲಸೌಕರ್ಯ ಮತ್ತು ಸ್ವಚ್ಛತೆಯಲ್ಲಿ ಇನ್ನೂ ಹಿಂದೆ ಬಿದ್ದಿದೆ.

ಈ ಗ್ರಾಮದಲ್ಲಿ 10 ಸಾವಿರ ಜನಸಂಖ್ಯೆ ಇದೆ. 300ಕ್ಕೂ ಅಧಿಕ ಶಿಕ್ಷಕರು ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸೇವೆಯಲ್ಲಿದ್ದಾರೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿದ ಗ್ರಾಮ ಎಂಬ ಖ್ಯಾತಿ ದಶಕಗಳಿಂದಲೂ ಈ ಊರಿಗೆ ಇದೆ. ಶಿಕ್ಷಣ ಮಾತ್ರವಲ್ಲದೇ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಗ್ರಾಮಸ್ಥರು ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಪಡೆದ ಜನ ಸುಧಾರಣೆಯಾಗಿದ್ದಾರೆ. ಆದರೆ, ಗ್ರಾಮದ ಅವಸ್ಥೆ ಬದಲಾಗಿಲ್ಲ.

ಮೂಲಸೌಕರ್ಯ ಮರೀಚಿಕೆ: ಗ್ರಾಮ ಪಂಚಾಯಿತಿ ವತಿಯಿಂದ ಜನರ ಸಮಸ್ಯೆಗಳ ನಿವಾರಣೆ ಕನಸಿನ ಮಾತಾಗಿದೆ. ಮೂಲ ಸೌಕರ್ಯ ಮರೀಚಿಕೆಯಾಗಿದೆ.

ADVERTISEMENT

ಮಳೆ ಬಂದರೆ ಗ್ರಾಮದ ಬೀದಿಗಳಲ್ಲಿ ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ಕಸಕಡ್ಡಿ, ಗಲೀಜು ಹರಡಿ ರಸ್ತೆ ಮೇಲೆ ತುಂಬಿ ತುಳುಕುತ್ತಿರುತ್ತದೆ. ಕೆಲ ಮುಖ್ಯ ಬೀದಿಗಳ ರಸ್ತೆಗಳಂತೂ ಅಭಿವೃದ್ಧಿ ಕಾಣದೆ ವರ್ಷಗಳೇ ಕಳೆದಿವೆ. ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಸಾಕಷ್ಟು ಸಲ ಗ್ರಾಮಸ್ಥರು ಗೋಗರೆದರೂ ಕೆಲಸವಾಗಿಲ್ಲ. ಬೀದಿ ದೀಪಗಳ ಅವ್ಯವಸ್ಥೆಯಿಂದಾಗಿ ನಿವಾಸಿಗಳಿಗೆ ತೊಂದರೆ ಆಗಿದೆ. ಕತ್ತಲೆಯಲ್ಲಿ ಕ್ರಿಮಿಕೀಟಗಳ ಹಾವಳಿ ಹೆಚ್ಚಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ, ಹದಗೆಟ್ಟ ಬೀದಿಗಳ ರಸ್ತೆ ದುರಸ್ತಿ ಕಾರ್ಯ ಹಾಗೆ ಉಳಿದಿದೆ ಎನ್ನುತ್ತಾರೆ ಗ್ರಾಮದ ನಿವಾಸಿಗಳು.

ಬಸವೇಶ್ವರ, ರೇವಣಸಿದ್ಧೇಶ್ವರ ನಗರ ಅವ್ಯವ‌ಸ್ಥೆ: ಗ್ರಾಮದ ರೇವಣಸಿದ್ಧೇಶ್ವರ ನಗರ, ಬಸವೇಶ್ವರ ನಗರ ತೀರಾ ಹದಗೆಟ್ಟಿದೆ. ರಸ್ತೆ ನಿರ್ಮಿಸಿ ತೊಂದರೆ ನಿವಾರಿಸಿ ಎಂದು ಕೇಳಿದರೆ ಜನಪ್ರತಿನಿಧಿಗಳು ಸಮಜಾಯಿಸಿ ನೀಡಿ ತೆರಳುತ್ತಾರೆ. ಹದಗೆಟ್ಟಿರುವ ರಸ್ತೆಯಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳು, ರೈತರು, ನಾಗರಿಕರು, ವೃದ್ಧರು ತೊಂದರೆಗೆ ಒಳಗಾಗಿದ್ದಾರೆ ಎಂದು ನಗರವಾಸಿಗಳು ಸಮಸ್ಯೆ ಬಗ್ಗೆ ತಿಳಿಸಿದರು.

ಇಂಚಲ ಶ್ರೀಗಳ ನಿತ್ಯಸ್ಮರಣೆ: ‘ಇಂಚಲ ಮುತ್ತಿನ ಗೊಂಚಲ’ ಎಂಬ ನುಡಿ ಈ ಭಾಗದಲ್ಲಿ ಮನೆ ಮಾತಾಗಿದೆ. ಗ್ರಾಮದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಶೈಕ್ಷಣಿಕ ಅಭಿವೃದ್ಧಿ ಆಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಇಂಚಲ ಗ್ರಾಮಕ್ಕೆ ಹೆಗ್ಗುರುತು ತಂದುಕೊಂಡಿದ್ದೇ ಈಗ ಮಠ.

ಆದರೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯ ಸಿಗದೆ ಕೊರಗುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.