ADVERTISEMENT

ಶಾಸಕರು ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು: BDCC ಬ್ಯಾಂಕ್ ಅಥಣಿ ಶಾಖೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 15:28 IST
Last Updated 4 ಜನವರಿ 2026, 15:28 IST
   

ಅಥಣಿ: ‘ಬಿಡಿಸಿಸಿ ಬ್ಯಾಂಕಿನ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಅವರು, ತಮ್ಮ ಮೇಲೆ ಶಾಸಕ ಲಕ್ಷ್ಮಣ ಸವದಿ, ಅವರ ಪುತ್ರ ಚಿದಾನಂದ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಬಿಡಿಸಿಸಿ ಬ್ಯಾಂಕ್‌ ಅಥಣಿ ಶಾಖೆ ಸಿಬ್ಬಂದಿ ಚೇತನಕುಮಾರ ದಳವಾಯಿ ಆರೋ‍ಪಿಸಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಂಗಪ್ಪ ಕರೆಣ್ಣವರ ಅವರು, ಹೊಸ ವಾಹನ ಖರೀದಿಗಾಗಿ ಪ್ರತಿ ಸಿಬ್ಬಂದಿಯಿಂದ ₹10 ಸಾವಿರಕ್ಕೆ ಬೇಡಿಕೆ ಇರಿಸಿ ಕಿರುಕುಳ ನೀಡುತ್ತಿದ್ದರು. ಹಣ ಕೊಡದಿದ್ದರೆ ವರ್ಗಾವಣೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಇದೇ ವಿಚಾರವಾಗಿ ಚರ್ಚಿಸಲು ಬ್ಯಾಂಕಿನ ನಿರ್ದೇಶಕರೂ ಆಗಿರುವ ಲಕ್ಷ್ಮಣ ಸವದಿ ಅವರ ಮನೆಗೆ ಹೋಗಿದ್ದೆವು. ಆಗ ಈ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಸವದಿ ಹೊರಗೆ ಕಳುಹಿಸಿದ್ದರು’ ಎಂದರು.

‘ಶಾಸಕರ ಮನೆಯಲ್ಲಿ ಶನಿವಾರ ವೈಯಕ್ತಿಕ ಕಾರಣದಿಂದ ಘಟನೆ ಆಗಿದೆಯೇ ಹೊರತು, ಶಾಸಕರು ಮತ್ತು ಅವರ ಪುತ್ರ ಹಲ್ಲೆ ಮಾಡಿಲ್ಲ’ ಎಂದು ಹೇಳಿದರು.

ADVERTISEMENT

ಸಿಬ್ಬಂದಿಗಳಾದ ಮಾಯಪ್ಪ ಹಡಲಗಿ, ಮಹೇಶ ಮಾಳಿ, ಶಿವಾನಂದ ಬುರುಡ, ಹನುಮಂತ ಸಂಕ್ರಟ್ಟಿ, ಗೈಬುಸಾ ಮಕಾನದಾರ ಇತರರಿದ್ದರು.

ಸಮುದಾಯದ ಹೆಸರು ದುರ್ಬಳಕೆ ಬೇಡ
‘ಈ ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ನಮ್ಮ ಸಮುದಾಯದ ಮುಖಂಡ ಸತ್ಯಪ್ಪ ಬಾಗೆಣ್ಣವರ ಅವರು, ಹಾಲುಮತದ ಸಮುದಾಯದ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಹಾಲುಮತ(ಕುರುಬರ) ಸಮಾಜದ ಅಧ್ಯಕ್ಷ ರಾವಸಾಬ ಬೇವನೂರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶ್ರೀಶೈಲ ಶೆಲ್ಲಪ್ಪಗೋಳ, ಸುರೇಶ ಮಾಯಣ್ಣವರ, ಸುರೇಶ ಪೂಜಾರಿ, ಕಲ್ಲಪ್ಪ ಮೇತ್ರಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.