ADVERTISEMENT

ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಬಾಲಚಂದ್ರ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಹೊಸ ಯೋಜನೆಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 5:12 IST
Last Updated 19 ಫೆಬ್ರುವರಿ 2026, 5:12 IST
ಬೆಳಗಾವಿಯಲ್ಲಿ ಬುಧವಾರ ಬಿಡಿಸಿಸಿ ಬ್ಯಾಂಕಿನ ಹೊಸ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ರಾಹುಲ್‌ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ, ಅಣ್ಣಾಸಾಹೇಬ ಹೊಲ್ಲೆ,  ಬಾಲಚಂದ್ರ ಜಾರಕಿಹೊಳಿ, ಗಣೇಶ ಹುಕ್ಕೇರಿ ಹಾಗೂ ನಿರ್ದೇಶಕರು ಪಾಲ್ಗೊಂಡರು
ಬೆಳಗಾವಿಯಲ್ಲಿ ಬುಧವಾರ ಬಿಡಿಸಿಸಿ ಬ್ಯಾಂಕಿನ ಹೊಸ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ರಾಹುಲ್‌ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ, ಅಣ್ಣಾಸಾಹೇಬ ಹೊಲ್ಲೆ,  ಬಾಲಚಂದ್ರ ಜಾರಕಿಹೊಳಿ, ಗಣೇಶ ಹುಕ್ಕೇರಿ ಹಾಗೂ ನಿರ್ದೇಶಕರು ಪಾಲ್ಗೊಂಡರು   

ಬೆಳಗಾವಿ: ‘ಬಿಡಿಸಿಸಿ ಬ್ಯಾಂಕ್‌ ಗ್ರಾಹಕರು ಅಪಪ್ರಚಾರಕ್ಕೆ ಕಿವಿಕೊಡಬೇಡಿ. ಬ್ಯಾಂಕನ್ನು ಚೆನ್ನಾಗಿ ನಡೆಸುತ್ತೇವೆ. ಯಾವ ರೈತರಿಗೂ, ಗ್ರಾಹಕರಿಗೂ ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ‌ ಹೇಳಿದರು.

ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಕೊಡಲು ಉದ್ದೇಶಿಸಿರುವ ಹೊಸ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಬ್ಯಾಂಕಿನ ಮೇಲೆ ಗ್ರಾಹಕರು ವಿಶ್ವಾಸ ಇಟ್ಟುಕೊಂಡು ಹೋಗಬೇಕು. ಸಚಿವ ಸತೀಶ್‌ ಜಾರಕಿಹೊಳಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಅವರು ಚುನಾವಣೆ ಮಾಡಿ ಈ ಆಡಳಿತ ನಡೆಸಬೇಕೆಂದು ನಮ್ಮ ಹತ್ತಿರ ಕೊಟ್ಟಿದ್ದೀರಿ. ಈ ಐದು ವರ್ಷದಲ್ಲಿ ಲೆಕ್ಕ ತಪ್ಪಿದರೆ ಎಲ್ಲಿ ಬೇಕಾದರೆ ನಿಂತು ನಮ್ಮನ್ನು ಕೇಳಿ’ ಎಂದು ಸವಾಲು ಹಾಕಿದರು.

ADVERTISEMENT

‘ಅಧಿಕಾರಿ ಬಿಟ್ಟು ಹೋದ ನಂತರ ಒಂದಿಷ್ಟು ಮಂದಿಗೆ ಬಹಳ ತೊಂದರೆಯಾಗಿದೆ. ರಾಜಕಾರಣದಲ್ಲಿ ಆರೋಪ ಸಾಮಾನ್ಯ. ಆದರೆ ಗ್ರಾಹಕರು ಮಾತ್ರ ಅಪಪ್ರಚಾರ ಕಿವಿಗೆ ಹಾಕಿಕೊಳ್ಳಬೇಡಿ. ನಿಮಗೇನಾದರೂ ಸಂಶಯ ಬಂದರೆ ಬ್ಯಾಂಕಿನ ಅಧ್ಯಕ್ಷ ಹಾಗೂ ನಮ್ಮನ್ನು ಕೇಳಿದರೆ ದೇವರ ಸಾಕ್ಷಿಯಾಗಿ ನಾವು ಉತ್ತರ ಕೋಡುತ್ತೇವೆ’ ಎಂದರು.

‘ಬಾಲಚಂದ್ರ ಜಾರಕಿಹೊಳಿ ಅವರಿಗೂ ಬಿಡಿಸಿಸಿ ಬ್ಯಾಂಕಿಗೂ ಏನು ಸಂಬಂಧ ಎಂದು ಪದೇಪದೇ ಕೇಳುತ್ತಿದ್ದಾರೆ. ಇದನ್ನು ಸಹಿಸದವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಬ್ಯಾಂಕಿನ ಪ್ರತಿ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತೇನೆ. ಯಾರು, ಏನೆಂದರೂ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು.

‘ಅಣ್ಣಾಸಾಬ್ ಜೊಲ್ಲೆ ಅವರು ಪ್ರತಿಯೊಂದು ಲೆಕ್ಕ ಹಾಕಿ ಬ್ಯಾಂಕ್‌ ನಡೆಸುತ್ತಿದ್ದಾರೆ. ಮಂಗಳೂರು ಡಿಸಿಸಿ ಬ್ಯಾಂಕ್ ರಿಕಾರ್ಡ್‌ ನಾವೇ ಮುರಿಯೋಣ ಎಂದು ಹಠ ತೊಟ್ಟಿದ್ದೇವೆ. ಮನುಷ್ಯ ಎಂದ ಮೇಲೆ ತಪ್ಪು ಮಾಡುವುದು ಸಹಜ. ಆದರೆ ಅದೇ ತಪ್ಪನ್ನು ಹೆಚ್ಚು ತೋರಿಸಲಾಗುತ್ತದೆ. ಈಗ ಬೆಳಗಾವಿ ಹಾಲು ಒಕ್ಕೂಟವನ್ನು ಜಿರೋ ಇದ್ದದ್ದನ್ನು ₹13 ಕೋಟಿ ಲಾಭ ಬರುವಂತೆ ಮಾಡಿದ್ದೇನೆ. ಅದರ ಬಗ್ಗೆ ಯಾರೂ ನಾತನಾಡುವುದಿಲ್ಲ’ ಎಂದೂ ಪ್ರಶ್ನಿಸಿದರು.

ಬ್ಯಾಂಕ್‌ ಅಧ್ಯಕ್ಷ ಅಣ್ಣಾಸಾಹೇಬ್‌ ಜೊಲ್ಲೆ ಮಾತನಾಡಿ, ‘ನವೆಂಬರ್‌ ತಿಂಗಳಲ್ಲಿ ನೂತನ ಆಡಳಿತ ಮಂಡಳಿ ಬಿಡಿಸಿಸಿ ಬ್ಯಾಂಕಿನ ಚುಕ್ಕಾಣಿ ಹಿಡಿದ ನಂತರ ಬಿಡಿಸಿಸಿ ಬ್ಯಾಂಕ್‌ ಠೇವಣಿ ಕಡಿಮೆಯಾಗಿತ್ತು. ಇದಕ್ಕೆ ಕೆಲವರು ಮಾಡಿದ ಅಪಪ್ರಚಾರ ಕಾರಣ. ಪ್ರಸ್ತುತ ಬ್ಯಾಂಕಿನಲ್ಲಿ ₹544 ಕೋಟಿ ಠೇವಣಿ ಹೆಚ್ಚಿಗೆಯಾಗಿದೆ. ಕಳೆದ ಒಂದು ವಾರದಿಂದ ದಿನಕ್ಕೆ ₹25 ಕೋಟಿ ಠೇವಣಿ ಹೆಚ್ಚಳವಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಬ್ಯಾಂಕ್‌ ನಿರ್ದೇಶಕರಾದ ಅರವಿಂದ ಪಾಟೀಲ್, ಅಪ್ಪಾಸಾಹೇಬ್ ಕುಲಗುಡೆ, ನೀಲಕಂಠ ಕಪ್ಪಲಗುದ್ದಿ, ಗಣೇಶ ಹುಕ್ಕೇರಿ, ಚನ್ನರಾಜ್ ಹಟ್ಟಿಹೊಳಿ, ರಾಹುಲ್ ಜಾರಕಿಹೊಳಿ, ವಿರುಪಾಕ್ಷಿ ಮಾಮನಿ, ಮಲ್ಲಪ್ಪ ಯಾದವಾಡ, ನಾನಾಸಾಹೇಬ್ ಪಾಟೀಲ, ಪ್ರಧಾನ ವ್ಯವಸ್ಥಾಪಕ ಎನ್.ಜಿ. ಕಲಾವಂತ, ಐ.ಸಿ. ಕಲ್ಮಠ, ಸಂಗಯ್ಯ ಹಿರೇಮಠ, ಪ್ರಕಾಶ ಬ್ಯಾಳಿಗೌಡರ ಸೇರಿದಂತೆ ಜಿಲ್ಲೆಯ ಎಲ್ಲ ಪಿಕೆಪಿಎಸ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.

ಬ್ಯಾಂಕನ್ನು ದೇಶದಲ್ಲೇ ನಂಬರ್‌ ಒನ್‌ ಸ್ಥಾನಕ್ಕೆರಿಸಬೇಕೆಂಬ ಗುರಿ ಹೊಂದಿದ್ದೇವೆ. ಕಳೆದ 30 ವರ್ಷಗಳಲ್ಲಿ ಜಾರಿಗೆ ತರದಂಥ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ
ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷ ಬಿಡಿಸಿಸಿ ಬ್ಯಾಂಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.