ADVERTISEMENT

ಬೇವು–ಬೆಲ್ಲ ಉಣಿಸಿದ ಮುಂಗಾರು

ಯಕ್ಸಂಬಾ: ಮೂರು ತಾಸು ಸುರಿದ ಧಾರಾಕಾರ ಮಳೆ, ಹಳ್ಳಗಳಂತಾದ ರಸ್ತೆಗಳು, ವಾಹನ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 16:58 IST
Last Updated 24 ಜೂನ್ 2019, 16:58 IST
   

ಚಿಕ್ಕೋಡಿ: ತಾಲ್ಲೂಕಿನ ಯಕ್ಸಂಬಾ ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾನುವಾರ ರಾತ್ರಿ 3 ತಾಸು ಧಾರಾಕಾರವಾಗಿ ಸುರಿದ ಮಳೆಗೆ 15 ಬೈಕ್ ಹಾಗೂ 5 ಕಾರು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಅಲ್ಲಲ್ಲಿ ಸಿಲುಕಿಕೊಂಡಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ, ಜನಜೀವನ ಅಸ್ತವ್ಯಸ್ತಗೊಂಡಿತು.

ಮಳೆಯ ರಭಸಕ್ಕೆ ಪಟ್ಟಣದ ಹಳ್ಳಕೊಳ್ಳ ಹಾಗೂ ಚರಂಡಿಗಳು ತುಂಬಿ ಹರಿದವು. ಯಕ್ಸಂಬಾ–ಅಂಕಲಿ, ಯಕ್ಸಂಬಾ–ಕಲ್ಲೋಳ, ಯಕ್ಸಂಬಾ–ದಾನವಾಡ ರಸ್ತೆಗಳನ್ನು ಮಳೆ ನೀರು ಆವರಿಸಿಕೊಂಡಿದ್ದರಿಂದ ಕೆಲ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.

ಗ್ರಾಮದ ಶಾಲಾ ಆವರಣಗಳು ಹಾಗೂ ಬಸ್‌ ನಿಲ್ದಾಣವೂ ಕೆರೆಯಾಗಿ ಮಾರ್ಪಟ್ಟಿತ್ತು. ಅಂಬೇಡ್ಕರ್ ನಗರ ಸೇರಿದಂತೆ, ವಿವಿಧ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡಿದರು.

ADVERTISEMENT

ಆಸ್ಪತ್ರೆಗೆ ನುಗ್ಗಿದ ನೀರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಳೆ ನೀರು ನುಗ್ಗಿದ್ದರಿಂದ, ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಕೆಸರು ತುಂಬಿದ್ದ ಆಸ್ಪತ್ರೆ ಆವರಣವನ್ನು ಸೋಮವಾರ ಬೆಳಿಗ್ಗೆ ಸಿಬ್ಬಂದಿ ಸ್ವಚ್ಛಗೊಳಿಸಿದರು. ಸ್ಥಳಕ್ಕೆ ರಾತ್ರಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಅಂಬೇಡ್ಕರ್ ನಗರ ವ್ಯಾಪ್ತಿಯ ಹಲವು ಮನೆಗಳಿಗೆ ನೀರು ನುಗ್ಗಿದೆ. ಒಂದು ಮನೆ ಜಖಂಗೊಂಡಿದೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾನಿ ಕುರಿತು ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ನೀರು ನುಗ್ಗಿರುವ ಮನೆಗಳಲ್ಲಿ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಒಂದು ದಿನದ ಮಟ್ಟಿಗೆ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ತಹಶೀಲ್ದಾರ್ ಡಾ. ಸಂತೋಷ ಬಿರಾದಾರ ಹೇಳಿದರು.

ಶಾಸಕಿ ಭೇಟಿ: ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಯಕ್ಸಂಬಾ ಪಟ್ಟಣದ ಅಂಬೇಡ್ಕರ್ ನಗರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅತಿವೃಷ್ಟಿಯಿಂದಾಗಿರುವ ಹಾನಿಯ ಕುರಿತು ಪರಿಶೀಲನೆ ನಡೆಸಿದರು. ನೀರು ನುಗ್ಗಿರುವ ಮನೆಗಳಿಗೆ ಭೇಟಿ ನೀಡಿ, ಜನರ ಕಷ್ಟಗಳನ್ನು ಆಲಿಸಿದ ಅವರು, ಸರ್ಕಾರದಿಂದ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.

ಮಳೆಪೀಡಿತ ಪ್ರದೇಶಗಳಿಗೆಮಾಜಿ ಸಂಸದ ಪ್ರಕಾಶ ಹುಕ್ಕೇರಿ ಭೇಟಿ ನೀಡಿ ಅಹವಾಲು ಆಲಿಸಿದರು. ‘ಹಾನಿ ಅನುಭವಿಸಿರುವ ಕುಟುಂಬಗಳಿಗೆ ಸರ್ಕಾರದಿಂದ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.

ಮಳೆ ವಿವರ: ಚಿಕ್ಕೋಡಿ–14.0 ಮಿ.ಮೀ, ಅಂಕಲಿ–42.4 ಮಿ.ಮೀ, ನಾಗರ ಮುನ್ನೋಳಿ–18.2 ಮಿ.ಮೀ, ಜೋಡಟ್ಟಿ–25.4 ಮಿ.ಮೀ, ಸದಲಗಾ–26.2 ಮಿ.ಮೀ, ನಿಪ್ಪಾಣಿ (ಎಆರ್‌ಎಸ್‌)–6.2 ಮಿ.ಮೀ, ನಿಪ್ಪಾಣಿ (ಪಿಡ್ಲ್ಯೂಡಿ) 7.6 ಮಿ.ಮೀ., ಗಳತಗಾ–18.4 ಮಿ.ಮೀ, ಸೌಂದಲಗಾ–5.2 ಮಿ.ಮೀ.

ಮಾಹಿತಿ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಮೊದಲಾದ ಭಾಗಗಳಲ್ಲಿ ಭಾನುವಾರ ಮಳೆಯ ರಭಸದಿಂದ ಆಗಿರುವ ಅವಾಂತರ, ಆಸ್ಪತ್ರೆಗೆ ನೀರು ನುಗ್ಗಿರುವುದು ಹಾಗೂ ವಾಹನಗಳು ಕೊಚ್ಚಿಕೊಂಡು ಹೋಗಿರುವ ಕುರಿತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲಾಧಿಕಾರಿಗೆ ಕರೆ ಮಾಡಿ ಮಾಹಿತಿ ಪಡೆದರು.

ಮಳೆಯಿಂದಾಗಿ ಯಕ್ಸಂಬಾದಲ್ಲಿ ವಾಹನಗಳು ಕೊಚ್ಚಿ ಹೋಗಿರುವ ಬಗ್ಗೆ ಮಾಧ್ಯಮದಲ್ಲಿ ಬಂದ ವರದಿ ಗಮನಿಸಿದ ಅವರು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ‘ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ ಮತ್ತು ಕೆಲವು ಕಾರುಗಳು ಮಳೆಯ ರಭಸಕ್ಕೆ ಕೊಂಚ ದೂರದವರೆಗೆ ತೇಲಿಕೊಂಡು ಹೋಗಿವೆ. ಯಾವುದೇ ರೀತಿಯ ಹಾನಿಯಾಗಿಲ್ಲ. ಆಸ್ಪತ್ರೆಗೆ ನುಗ್ಗಿದ ನೀರನ್ನು ಹೊರಕ್ಕೆ ಹಾಕಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾಹಿತಿ ನೀಡಿದರು.

‘ಮಳೆಗಾಲ ಆರಂಭಗೊಂಡಿರುವುದರಿಂದ ಜನರ ಜೀವ, ಆಸ್ತಿಪಾಸ್ತಿಗಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದರು. ‘ಮಳೆಗಾಲ ಮತ್ತು ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.