ADVERTISEMENT

‘ಉಡಾನ್–3’ ಯೋಜನೆ | ವಿಮಾನಸೇವೆ ವಿಸ್ತರಿಸಲು ಬೇಡಿಕೆ

‘ಉಡಾನ್–3’ ಯೋಜನೆ ಬಳಿಕ ಹಲವು ಮಾರ್ಗಗಳು ರದ್ದು

ಇಮಾಮ್‌ಹುಸೇನ್‌ ಗೂಡುನವರ
Published 16 ಜೂನ್ 2025, 5:53 IST
Last Updated 16 ಜೂನ್ 2025, 5:53 IST
ಬೆಳಗಾವಿ ವಿಮಾನ ನಿಲ್ದಾಣ 
ಬೆಳಗಾವಿ ವಿಮಾನ ನಿಲ್ದಾಣ    

ಬೆಳಗಾವಿ: ‌ಇಲ್ಲಿನ ವಿಮಾನ ನಿಲ್ದಾಣದಿಂದ ಸದ್ಯ ಆರು ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನ ಸೇವೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಇದೆ. ಹೀಗಾಗಿ ‘ಉಡಾನ್‌–3’ ಯೋಜನೆ ಮುಗಿದ ಬಳಿಕ ಸ್ಥಗಿತಗೊಳಿಸಿರುವ ಮಾರ್ಗಗಳನ್ನು ಪುನಃ ಆರಂಭಿಸಬೇಕು ಎಂಬ ಆಗ್ರಹ ಪ್ರಯಾಣಿಕರಿಂದ ವ್ಯಕ್ತವಾಗಿದೆ.

2023ರಲ್ಲಿ ಬೆಳಗಾವಿ ನಿಲ್ದಾಣದಿಂದ 2.74 ಲಕ್ಷ ಮತ್ತು 2024ರಲ್ಲಿ 3.47 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು. 2025ರ ಜನವರಿಂದ ಏಪ್ರಿಲ್‌ 30ರವರೆಗೆ 1.09 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಸದ್ಯ ಇಂಡಿಗೊ ಮತ್ತು ಸ್ಟಾರ್‌ ಏರ್‌ ಸಂಸ್ಥೆಯವರು ಬೆಳಗಾವಿಯಿಂದ ದೆಹಲಿ, ಹೈದರಾಬಾದ್‌, ಬೆಂಗಳೂರು, ಮುಂಬೈ, ಅಹಮದಾಬಾದ್‌, ಜೈಪುರ ಮಾರ್ಗಗಳಲ್ಲಿ ಸೇವೆ ಕಲ್ಪಿಸಿದ್ದಾರೆ.

ADVERTISEMENT

2019ರಿಂದ ‘ಉಡಾನ್‌–3’ ಯೋಜನೆಯಡಿ ಬೆಳಗಾವಿಯಿಂದ ಹೈದರಾಬಾದ್, ತಿರುಪತಿ, ಮುಂಬೈ, ಪುಣೆ, ಸೂರತ್, ಕಡಪ, ಮೈಸೂರು, ಇಂದೋರ್, ಜೋಧಪುರ, ಅಹಮದಾಬಾದ್, ನಾಸಿಕ್ ಮತ್ತು ನಾಗ್ಪುರಕ್ಕೆ ನೇರ ವಿಮಾನಗಳು ಹಾರಾಟ ನಡೆಸಿದ್ದವು. ಪ್ರಯಾಣಿಕರಿಂದ ಸ್ಪಂದನೆಯೂ ಇತ್ತು. 

ಆದರೂ, ಯೋಜನೆ ಮುಗಿದ ಕಾರಣ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ಬೇರೆ ನಗರಗಳಿಗೆ ಬದಲಾಯಿಸಿವೆ. ಕೆಲ ಮಾರ್ಗಗಳಲ್ಲಿ ಸೇವೆ ಸ್ಥಗಿತಗೊಂಡಿರುವುದು ಪ್ರಯಾಣಿಕರ ನಿರಾಸೆಗೆ ಕಾರಣವಾಗಿದೆ.

ಉಡಾನ್‌–3 ಯೋಜನೆಯಡಿ 2023ರಲ್ಲಿ ಬೆಳಗಾವಿ–ಜೈಪುರ ಮಾರ್ಗದಲ್ಲಿ ಆರಂಭಗೊಂಡಿದ್ದ ಸೇವೆ ಮಾತ್ರ ಈಗ ಲಭ್ಯವಿದ್ದು, 2026ರಲ್ಲಿ ಅದು ಮುಗಿಯಲಿದೆ.

‘ಬೆಳಗಾವಿಯಲ್ಲಿ ಮೂರು ವಿಶ್ವವಿದ್ಯಾಲಯ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಸೇನೆ ಮತ್ತು ವಾಯುಪಡೆ ನೆಲೆಗಳು ಹಾಗೂ ರಫ್ತು ಆಧಾರಿತ ಕೈಗಾರಿಕೆಗಳಿವೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾಕ್ಕೆ ಇದು ಸಂಪರ್ಕ ಕೊಂಡಿ. ಪ್ರಯಾಣಿಕರು ಮತ್ತು ವಾಣಿಜ್ಯ ದೃಷ್ಟಿಯಿಂದ ದೇಶದ ಹೆಚ್ಚಿನ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನ ಸೇವೆಗಳು ಬೇಕು’ ಎಂಬ ಬೇಡಿಕೆ ಸಾರ್ವಜನಿಕರಿಂದ ಇದೆ.

ಜಗದೀಶ ಶೆಟ್ಟರ್‌
ವಿಮಾನಯಾನ ಸಚಿವರು ಮತ್ತು ಸಂಸ್ಥೆಗಳ ಜತೆಗೆ ಮಾತುಕತೆ ನಡೆಸಿ ಉಡಾನ್‌–3 ಯೋಜನೆಯಡಿ ಸೇವೆ ಸ್ಥಗಿತಗೊಳಿಸಿದ ಪೈಕಿ ಬೇಡಿಕೆ ಇರುವ ಮಾರ್ಗಗಳಲ್ಲಿ ಸೇವೆ ಒದಗಿಸಲು ಕೋರಿದ್ದೇನೆ
ಜಗದೀಶ ಶೆಟ್ಟರ್‌ ಸಂಸದ
ಬೆಳಗಾವಿಯಿಂದ ವಿವಿಧ ಮಹಾನಗರಗಳಿಗೆ ಸೇವೆ ಒದಗಿಸುವಂತೆ ಪ್ರಯಾಣಿಕರಿಂದ ಬೇಡಿಕೆ ಬಂದಿದೆ. ನಾವು ವಿಮಾನಯಾನ ಸಂಸ್ಥೆಗಳ ಜತೆಗೆ ಮಾತುಕತೆ ನಡೆಸಿದ್ದೇವೆ
ಎಸ್‌.ತ್ಯಾಗರಾಜನ್‌ ನಿರ್ದೇಶಕ ವಿಮಾನ ನಿಲ್ದಾಣ
ಉಡಾನ್‌–3 ಯೋಜನೆಯಡಿ ಸೇವೆ ನಿಂತಿರುವ ಮಾರ್ಗಗಳಲ್ಲಿ ಮತ್ತೆ ವಿಮಾನಸೇವೆ ಆರಂಭಿಸಲು ಜನಪ್ರತಿನಿಧಿಗಳು ಕ್ರಮ ವಹಿಸಬೇಕು
ವಿಕಾಸ ಕಲಘಟಗಿ ಮಾಜಿ ಅಧ್ಯಕ್ಷ ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.