ADVERTISEMENT

ಚನ್ನಮ್ಮನ ನಾಡಿನಲ್ಲಿ ‘ಅಕ್ಕಪಡೆ’ ಆರಂಭ: ಸಾಹಸ ಪ್ರದರ್ಶನ ಮನಸೋತ ಜನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 7:44 IST
Last Updated 18 ಫೆಬ್ರುವರಿ 2026, 7:44 IST
ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದಲ್ಲಿ ಮಂಗಳವಾರ ಅಕ್ಕಪಡೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಚಾಲನೆ ಕೊಟ್ಟರು   
ಪ್ರಜಾವಾಣಿ ಚಿತ್ರ
ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದಲ್ಲಿ ಮಂಗಳವಾರ ಅಕ್ಕಪಡೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಚಾಲನೆ ಕೊಟ್ಟರು    ಪ್ರಜಾವಾಣಿ ಚಿತ್ರ   

ಬೆಳಗಾವಿ: ವೀರರಾಣಿ ಚನ್ನಮ್ಮನ ನಾಡು ಬೆಳಗಾವಿಯಲ್ಲಿ ಮಂಗಳವಾರ ಕಾರ್ಯಾರಂಭ ಮಾಡಿದ ಅಕ್ಕಪಡೆ ಜಿಲ್ಲೆಯ ಮಹಿಳೆಯರಲ್ಲಿ ಹೊಸ ಭರವಸೆ ಮೂಡಿಸಿತು. ಪಡೆಯ ರಾಜ್ಯ ಸಂಯೋಜಕಿ ಶೈನಿ ಪ್ರದೀಪ‌್ ಗುಂಟಿ ನೇತೃತ್ವದಲ್ಲಿ ಬೀದರ್‌ನ ಅಕ್ಕ ಪಡೆ ಸದಸ್ಯೆಯರು ಸಾಹಸ ಪ್ರದರ್ಶನದ ಮೂಲಕ ರೋಮಾಂಚನ ಮೂಡಿಸಿದರು.

ಕಮಾಂಡೋ ಸಮವಸ್ತ್ರದಲ್ಲಿದ್ದ 30 ವನಿತೆಯರನ್ನು ನೋಡಿದ ಜನ ಗೌರವದಿಂದ ಸೆಲ್ಯೂಟ್‌ ಹೊಡೆದರು. ಅವರು ಪ್ರದರ್ಶಿಸಿದ ಸಾಹಸ ಕಲೆಗಳು, ಆತ್ಮರಕ್ಷಣಾ ಪಟ್ಟುಗಳು ನೋಡುಗರನ್ನು ಮಂತ್ರಮುಗ್ದಗೊಳಿಸಿದವು.

ಕೆಂಪು ಹೆಂಚುಗಳನ್ನು ಒಂದರ ಮೇಲೊಂದು ಇರಿಸಿದ ಇಬ್ಬ ಸಾಹಸಿ ಮೊಣಕೈಯಿಂದ ಗುದ್ದಿ ಒಡೆದರು. ಕಾಲಿನಿಂದ ಒದ್ದು ಒಂದೊಂದೇ ಹೆಂಚು ಒಡೆದು ಇನ್ನಿಬ್ಬರು ಪುಡಿಗಟ್ಟಿ ಗಟ್ಟಿತನ ಪ್ರದರ್ಶಿಸಿದರು. ‘ಮಹಿಳೆಯರು ಮೇಲೆ ದೌರ್ಜನ್ಯ ನಡೆಸಿದರೆ, ನಿಮಗೂ ಇಂಥದ್ದೇ ಏಟು ಬೀಳುತ್ತದೆ’ ಎಂಬ ಖಡಕ್‌ ಸಂದೇಶವನ್ನು ‍ಪುಂಡ –ಪೋಕರಿಗಳಿಗೆ ಕೊಟ್ಟರು.

ADVERTISEMENT

ಇದಕ್ಕೂ ಒಂದು ಹೆಜ್ಜೆಮುಂದೆ ಹೋದ ಸದಸ್ಯೆಯೊಬ್ಬರು ಗಟ್ಟಿಗಿತ್ತಿಯಂತೆ ಬೈಕ್‌ ಏರಿ, ಸಾಲಾಗಿ ಹಿಡಿದು ನಿಲ್ಲಿಸಿದ ಟ್ಯೂಬ್‌ಲೈಟ್‌ಗಳ ಮಧ್ಯೆ ನುಗ್ಗಿದರು. ಒಂದೇ ಏಟಿಗೆ ಎಲ್ಲ ಟ್ಯೂಬ್‌ಲೈಟ್‌ ಪುಡಿಗಟ್ಟಿ, ಸಾಹಸ ಪ್ರದರ್ಶಿಸಿ ಜನರನ್ನು ಮಂತ್ರಮುಗ್ಧಗೊಳಿಸಿದರು.

ಎಲ್ಲ ಸದಸ್ಯೆಯರು ಏಕಕಾಲಕ್ಕೆ ಕಬ್ಬಿಣದ ಚೈನ್‌ ಮತ್ತು ಲಾಠಿಗಳನ್ನು ಬೀಸಿ, ‘ನಾವು ಪುರುಷರಿಗೆ ಯಾವುದಕ್ಕೂ ಕಮ್ಮಿ ಇಲ್ಲ’ ಎಂಬುದನ್ನು ಸಾಬೀತುಪಡಿಸಿದರು.

ಇವೆಲ್ಲಕ್ಕಿಂತ ರೋಮಾಂಚನ ಮೂಡಿಸಿದ್ದು ಮುಂಗೈ ಮೇಲಿನ ಬೈಕ್‌ ಸವಾರಿ. 30 ಸದಸ್ಯೆಯರು ಸಾಲಾಗಿ ಮಲಗಿದರು. ಆಗ ಸದಸ್ಯರೊಬ್ಬರು ಬೈಕ್‌ ಹತ್ತಿಕೊಂಡು ಬಂದು ಎಲ್ಲರ ಮುಂಗೈ ಮೇಲೆ ವಾಹನದ ಎರಡು ಗಾಲಿಗಳನ್ನು ದಾಟಿಸಿಕೊಂಡು ಹೋದರು. ಆದರೆ, ಸದಸ್ಯೆಯರು ಕಿಂಚಿತ್ತು ಅಲುಗಾಡದೆ, ತುಟಿ ಪಿಟಕ್ಕೆನ್ನದೆ ಮತ್ತು ಕನಿಷ್ಠ ಇರುವೆ ಕಚ್ಚಿದಷ್ಟು ನೋವಾಗದಂತೆ ನಿರಾಯಾಸವಾಗಿ ಮೇಲೆದ್ದು ನಿಂತರು. ಆಗ ಸುತ್ತಲೂ ಸೇರಿದ್ದ ಜನರಿಂದ ಚಪ್ಪಾಳೆಗಳ ಸುರಿಮಳೆ ಮತ್ತು ಷಹಬ್ಬಾಶ್‌ಗಿರಿ ಸಿಕ್ಕಿತು.

ರೊಟ್ಟಿ ತಟ್ಟಲು ಮತ್ತು ಬಳೆ ತೊಡಲು ಮಾತ್ರ ಸೀಮಿತ ಎಂದುಕೊಂಡಿದ್ದ ಕೈಗಳು ಸಾಹಸಕ್ಕೆ ನಿಂತರೆ, ಎಂಥ ಬಿರುಸಿನ ಏಟುಗಳನ್ನು ನೀಡಬಲ್ಲವು ಎಂಬುದನ್ನು ಅಕ್ಕಪಡೆಯ ವೀರವನಿತೆಯರು ಸಮಾಜದ ಮುಂದೆ ತೋರಿಸಿಕೊಟ್ಟರು.

ಈ ಮೂಲಕ ಕಿಕ್ಕಿರಿದು ಸೇರಿದ್ದ ಮಹಿಳಾ ಸಮೂಹದಲ್ಲಿ ಸ್ವಾಭಿಮಾನ ಮತ್ತು ಸಾಹಸದ ಕಿಡಿ ಹೊತ್ತಿಸಿದರು. ತುರ್ತು ಪರಿಸ್ಥಿತಿಯನ್ನು ಮಹಿಳೆಯರು ಮತ್ತು ಮಕ್ಕಳು ಹೇಗೆ ಎದುರಿಸಬೇಕು ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು.

‘ನಿಮ್ಮ ಜತೆಗೆ ನಾವಿದ್ದೇವೆ. ಯಾರೂ ಭಯಪಡುವ ಅಗತ್ಯವಿಲ್ಲ. ಪೊಲೀಸ್‌ ಠಾಣೆಗೆ ನಿಮಗೆ ಬರಲು ಆಗದಿದ್ದರೆ, ನಾವೇ ನೀವಿದ್ದಲ್ಲಿಗೆ ಬರುತ್ತೇವೆ’ ಎಂಬ ಸಂದೇಶ ಕೊಟ್ಟರು. 

ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಶಿಂಧೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನಕುಮಾರ್ ಎಂ.ಎನ್., ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ, ಇಲಾಖೆ ನಿರೂಪಣಾಧಿಕಾರಿ ಅನಿಲಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

ಮಹಿಳೆಯರ ರಕ್ಷಣೆಗಾಗಿ ಅಕ್ಕಪಡೆ: ಹೆಬ್ಬಾಳಕರ

ಅಕ್ಕಪಡೆಗೆ ಚಾಲನೆ ಕೊಟ್ಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ‘ಈ ಹಿಂದೆ ರಾಜ್ಯದಲ್ಲಿ ಚನ್ನಮ್ಮ ಪಡೆ ಓಬವ್ವ ಪಡೆ ಇದ್ದವು. ಅವುಗಳ ಕಾರ್ಯಶೈಲಿ ಬೇರೆ ಇತ್ತು. ಈಗ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ದೃಷ್ಟಿಯಿಂದ ಅಕ್ಕಪಡೆ ರಚಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾಗಿ ದೂರು ನೀಡುವವರ ಹೆಸರು ಗೋಪ್ಯವಾಗಿ ಇರಿಸುತ್ತೇವೆ’ ಎಂದರು.

‘ಜಾತ್ರೆ ನಡೆಯುವ ಸ್ಥಳಗಳು ಮಹಿಳಾ ವಸತಿ ನಿಲಯಗಳು ಶಾಲಾ–ಕಾಲೇಜುಗಳು ಸಮುದಾಯ ಭವನ ಸೇರಿದಂತೆ ಜನನಿಬಿಡ ಪ್ರದೇಶಗಳಿಗೆ ಅಕ್ಕ ಪಡೆ ಭೇಟಿ ಕೊಡುತ್ತದೆ. ಇದನ್ನು ಆರಂಭಿಸಿದ ಉದ್ದೇಶ ಈಡೇರಬೇಕು ಎಂದರೆ ಸಮಾಜದ ಬೆಂಬಲವೂ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

‘ಮಹಿಳೆಯರು ಮತ್ತು ಮಕ್ಕಳು ತಮ್ಮ ಮೇಲೆ ಆಗಿರುವ ದೌರ್ಜನ್ಯದ ಬಗ್ಗೆ ತಿಳಿಸಲು ಅನುಕೂಲವಾಗುವಂತೆ 24x7 ಮಾದರಿಯಲ್ಲಿ ಸಹಾಯವಾಣಿ ತೆರೆದಿದ್ದೇವೆ. ರಕ್ಷಣೆ ಬಯಸಲು ಇಚ್ಛಿಸುವವರು ಅಕ್ಕ ಪಡೆಯ ಸಹಾಯವಾಣಿ ಸಂಖ್ಯೆ 181ಕ್ಕೆ ಕರೆ ಮಾಡಬಹುದು. ಇದರೊಂದಿಗೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಪೊಲೀಸ್‌ ಇಲಾಖೆ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಬಹುದು. ಇದರ ಸದ್ಬಳಕೆ ಆಗಬೇಕು.  ಮನೆಗಳಲ್ಲಿ ತೊಂದರೆ ಅನುಭವಿಸುತ್ತಿದ್ದವರೂ ಅಕ್ಕಪಡೆ ಸಂಪರ್ಕಿಸಬಹುದು’ ಎಂದರು.

ಬೆಳಗಾವಿ ಗ್ರಾಮೀಣ ತಾಲ್ಲೂಕು ರಚನೆಗೆ ಪ್ರಸ್ತಾವ ಹೋಗಿದೆ. ಸರ್ಕಾರದ ಮಟ್ಟದಲ್ಲಿ ಇದರ ಕೆಲಸಗಳು ಮುಂದುವರಿದಿವೆ.
ಲಕ್ಷ್ಮೀ ಹೆಬ್ಬಾಳಕರ, ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.