
ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೇಶನೂರು ಗ್ರಾಮದಲ್ಲಿ ಬುಧವಾರ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಚಾರವಾಗಿ ಎರಡು ಸಮುದಾಯಗಳ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.
ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ವಾಲ್ಮೀಕಿ ಸಮುದಾಯದ ಕೆಲವು ಯುವಕರು ಜಾಗದ ಸ್ವಚ್ಛತೆ ನಡೆಸಿದ್ದರು. ಈ ವೇಳೆ ತಕರಾರು ತೆಗೆದ ಪಕ್ಕದ ಮನೆಯವರು, ಪರಿಶಿಷ್ಟ ಜಾತಿಯವರ ಮನೆಯ ಹತ್ತಿರ ವಾಲ್ಮೀಕಿ ಸಮುದಾಯ ಭವನ ಬೇಡ ಎಂದು ವಿರೋಧಿಸಿದರು. ಈ ವೇಳೆ ಎರಡೂ ಕಡೆಯ ಜನರಿಂದ ಮಾತಿಗೆ ಮಾತು ಬೆಳೆಯಿತು. ಅದು ವಿಕೋಪಕ್ಕೆ ಹೋಗಿ ಪರಸ್ಪರ ಬಡಿದಾಡಲು ಶುರು ಮಾಡಿದರು. ನಂತರ ಗುಂಪೊಂದು ಸದಾಶಿವ ಭಜಂತ್ರಿ ಎನ್ನುವರ ಮನೆಯ ಮೇಲೆ ಕಲ್ಲು ತೂರಾಟ ಆರಂಭಿಸಿತು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಎರಡೂ ಕಡೆಯ ಗುಂಪುಗಳನ್ನು ಚದುರಿಸಿದರು. ಸದಾಶಿವ ಅವರ ಮನೆಯ ಕದ, ಕಿಟಕಿ ಹಾಗೂ ಬಾತ್‌ರೂಮಿನ ಕದಗಳನ್ನು ಮುರಿಯಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಶೋಭಾ ಭಜಂತ್ರಿ ಅವರು ಓರ್ವ ಮಹಿಳೆ ಸೇರಿದಂತೆ 17 ಜನರ ವಿರುದ್ಧ ದೂರು ನೀಡಿದ್ದಾರೆ. ಆರೋಪಿಗಳು ಅಕ್ರಮವಾಗಿ ಮನೆ ಪ್ರವೇಶ ಮಾಡಿ ಮನೆಯಲ್ಲಿದ್ದ ನಾಲ್ವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ವಾಲ್ಮೀಕಿ ಸಮುದಾಯದ ಲಕ್ಷ್ಮೀ ತಳವಾರ ಅವರು ಆರು ಜನರ ವಿರುದ್ಧ ದೂರು ನೀಡಿದ್ದಾರೆ. ದೇಶನೂರು ಗ್ರಾಮದಲ್ಲಿ ವಾಲ್ಮೀಕಿ ಮೂರ್ತಿ ಹಾಗೂ ಸುತ್ತಲಿನ ಜಾಗ ಸ್ವಚ್ಛಗೊಳಿಸುವ ವೇಳೆ ಆರು ಜನರ ಆರೋಪಿಗಳು ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ನೇಸರಗಿ ಪೊಲೀಸರು ಗುರುವಾರ ಎಲ್ಲರನ್ನೂ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಎರಡೂ ಕಡೆಯ ಜನ ಗುಂಪಾಗಿ ಬಂದು ಗುರುವಾರ ತಮ್ಮ ತಮ್ಮ ಹೇಳಿಕೆಗಳನ್ನು ದಾಖಲಿಸಿದರು.
ಗ್ರಾಮದಲ್ಲಿ ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಶೇಷ ತುಕಡಿಗಳನ್ನು ಸ್ಥಳದಲ್ಲಿ ನಿಯೋಜನೆ ಮಾಡಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಜನ ಗುಂಪಾಗಿ ಸೇರದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯ ವಿಡಿಯೊಗಳನ್ನು ನೋಡಿ, ತಪ್ಪಿತಸ್ಥರ ಮೇಲೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ದೇಶನೂರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ವಿಡಿಯೊಗಳನ್ನು ನೋಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದುಕೆ.ರಾಮರಾಜನ್ ಎಸ್ಪಿ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.