ADVERTISEMENT

ಬೆಳಗಾವಿ | ಬಿಡಿಸಿಸಿ ಚುನಾವಣೆ: ಕಾಂಗ್ರೆಸ್‌– ಬಿಜೆಪಿ ಕಾರ್ಯಕರ್ತರ ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 9:42 IST
Last Updated 12 ಸೆಪ್ಟೆಂಬರ್ 2025, 9:42 IST
<div class="paragraphs"><p>ಕಾರ್ಯಕರ್ತರ ಮಾರಾಮಾರಿ</p></div>

ಕಾರ್ಯಕರ್ತರ ಮಾರಾಮಾರಿ

   Prithvi

ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಚುನಾವಣೆ ಹಿನ್ನೆಲೆಯಲ್ಲಿ, ಜಿಲ್ಲೆಯ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಚುನಾವಣೆ ನಡೆಸಲು ಬಂದಿದ್ದ ಪಿಕೆಪಿಎಸ್‌ ಕಾರ್ಯದರ್ಶಿಯನ್ನು ಅಪಹರಣ ಮಾಡುವ ಯತ್ನವೂ ನಡೆಯಿತು. ಪೊಲೀಸರ ಸಮ್ಮುಖದಲ್ಲಿಯೇ ಎರಡೂ ಕಡೆಯ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದು, ಒಬ್ಬರಿಗೊಬ್ಬರು ಹೊಡೆದಾಡಿಕೊಂಡರು.

ಅಕ್ಟೋಬರ್‌ 19ರಂದು ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ. ಇದಕ್ಕೆ ಮತ ಚಲಾಯಿಲು ಪ್ರತಿಯೊಂದು ಪಿಕೆಪಿಎಸ್‌ನಿಂದ ಒಬ್ಬರಿಗೆ ಮತದಾನ ಹಕ್ಕು ನೀಡಲು ಠರಾವು ಪಾಸ್‌ ಮಾಡಬೇಕು. ಚನ್ನಮ್ಮನ ಕಿತ್ತೂರಿನ ಪಿಕೆಪಿಎಸ್‌ನಲ್ಲಿ ಶುಕ್ರವಾರ ಇದರ ಠರಾವ್‌ ಪಾಸ್‌ ಮಾಡಲು ಚುನಾವಣೆ ನಿಗದಿಯಾಗಿತ್ತು. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಪಿಕೆಪಿಎಸ್‌ ಕಾರ್ಯದರ್ಶಿಯನ್ನು ಕಾರಿನಲ್ಲಿ ಅಪಹರಣ ಮಾಡಲು ಯತ್ನಿಸಿದರು. ಆಗ ಅಡ್ಡಬಂದು ಕಾರ್‌ ತಡೆದ ಬಿಜೆಪಿ ಕಾರ್ಯಕರ್ತರು ಕಾರಿನ ಗಾಜು ಒಡೆದರು. ಇದರಿಂದ ಸ್ಥಳದಲ್ಲಿ ಕೆಲಕಾಲ ತ್ವೇಷಮಯ ವಾತಾವರಣ ನಿರ್ಮಾಣವಾಯಿತು.

ADVERTISEMENT

ಕಾರಿನಿಂದ ಕಾರ್ಯದರ್ಶಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರನ್ನು ಹೊರಕ್ಕೆ ಎಳೆದರು. ಕಾಲರ್‌ ಹಿಡಿದು ಎಳೆದಾಡಿಕೊಂಡು, ಒಬ್ಬರಿಗೊಬ್ಬರು ಹೊಡೆದಾಡಿಕೊಂಡರು. ಎರಡೂ ಗುಂಪುಗಳ ಮಧ್ಯೆ ಘರ್ಷಣೆ ಆರಂಭವಾಗಿದ್ದರಿಂದ ಅಪಾರ ಸಂಖ್ಯೆಯ ಜನ ಸ್ಥಳದಲ್ಲಿ ಸೇರಿದರು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.

‘ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. 11 ಸದಸ್ಯರ ಪೈಕಿ ಯಾರು ಹೆಚ್ಚು ಕೋರಂ ತೋರಿಸುತ್ತಾರೋ ಅವರಿಗೆ ಮತದಾನ ಮಾಡುವ ಹಕ್ಕು ಲಭಿಸುತ್ತದೆ. ಶುಕ್ರವಾರ ಕೋರಂ ಚುನಾವಣೆ ಕರೆಯಲಾಗಿತ್ತು. ಕಾಂಗ್ರೆಸ್‌ ಸದಸ್ಯರ ಸಂಖ್ಯೆ ಕಡಿಮೆ ಇದ್ದ ಕಾರಣ ಚುನಾವಣೆ ಮುಂದೂಡುವ ಹುನ್ನಾರ ನಡೆಸಿದರು. ಪಿಕೆಪಿಎಸ್‌ನ ಕಾರ್ಯದರ್ಶಿಯನ್ನು ಕಾರಿನಲ್ಲಿ ಅಪಹರಣ ಮಾಡಲು ಮುಂದಾದರು. ಇದೇ ಕಾರಣಕ್ಕೆ ಗಲಾಟೆಯಾಗಿದೆ’ ಎಂದು ಬಿಜೆಪಿ ಕಾರ್ಯಕರ್ತರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.