ಬೆಳಗಾವಿ: ‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಕುರಿತು ಸುಪ್ರೀಂ ಕೋರ್ಟಿನಲ್ಲಿ ನಡೆಯುತ್ತಿರುವ ಪ್ರಕರಣದ ಬಗ್ಗೆ ಕನ್ನಡಿಗರು ಆತಂಕಪಡುವ ಅಗತ್ಯವಿಲ್ಲ. ಒಪ್ಪಿದರೆ ಮಹಾಜನ ವರದಿ ಒಪ್ಪಬೇಕು; ಇಲ್ಲದಿದ್ದರೆ ಯಥಾಸ್ಥಿತಿ ಮುಂದುವರೆಯಬೇಕು ಎಂಬುದು ರಾಜ್ಯದ ದೃಢ ನಿರ್ಧಾರವಾಗಿದೆ’ ಎಂದು ಗಡಿ ಉಸ್ತುವಾರಿ ಸಚಿವರೂ ಆಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ಗಡಿ ಭಾಗದ ಕನ್ನಡರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿ ಮಹಾಜನ ಆಯೋಗ ರಚನೆಗೆ ನಮ್ಮ ಸರ್ಕಾರ ಒಪ್ಪಿಕೊಂಡಿದೆ. ಮಹಾಜನ ವರದಿಯೇ ಅಂತಿಮ. ಅದನ್ನು ಮಹಾರಾಷ್ಟ್ರ ಒಪ್ಪದಿದ್ದರೆ ವ್ಯತ್ಯಾಸವೇನೂ ಆಗುವುದಿಲ್ಲ’ ಎಂದರು.
‘ಗಡಿ ವಿವಾದ ಸಾಂವಿಧಾನಿಕ ವಿಷಯ ಆಗಿರುವುದರಿಂದ ಅದನ್ನು ಸುಪ್ರೀಂ ಕೊರ್ಟಿನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೋ, ಬೇಡವೋ ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಗಡಿ ಕನ್ನಡಿಗರು ಚಿಂತೆಪಡಬೇಕಿಲ್ಲ’ ಎಂದರು.
‘ಗೋವಾ ಕನ್ನಡಿಗರ ಮೇಲಿನ ಅನ್ಯಾಯ ತಡೆಯಲು ಎಲ್ಲ ಕ್ರಮ ವಹಿಸಲಾಗಿದೆ. ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡಲಾಗಿದೆ’ ಎಂದರು.
‘ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಕ್ರಮ ಅನುಸರಿಸಬೇಕಾಗುತ್ತದೆ. ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು’ ಎಂದು ಭರವಸೆ ನೀಡಿದರು.
‘ಬೆಳಗಾವಿಯೂ ಸೇರಿದಂತೆ ರಾಜ್ಯದ ಗಡಿಯಲ್ಲಿರುವ ಕನ್ನಡ ಶಾಲೆಗಳನ್ನು ಸದೃಢಗೊಳಿಸಲು ಶಿಕ್ಷಣ ಸಚಿವರ ಜತೆ ಚರ್ಚಿಸಲಾಗುವುದು. ಇಲ್ಲಿನ ಸಂಘಟನೆಗಳು ವರದಿ ನೀಡಬೇಕು’ ಎಂದರು.
‘ಬೆಳಗಾವಿಯಲ್ಲಿ ನಡೆಯುವ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಮೈಸೂರು ದಸರಾ ಮಾದರಿಯಲ್ಲಿ ವಿಶೇಷ ಅನುದಾನ ಒದಗಿಸಬೇಕು ಎಂಬುದು ನ್ಯಾಯಯುತ ಬೇಡಿಕೆಯಾಗಿದ್ದು, ಪರಿಶೀಲಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.