ಬೆಳಗಾವಿ: ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಬುಧವಾರ ಮಹಿಳಾ ಪ್ರಯಾಣಿಕರೊಬ್ಬರ ಚಿನ್ನಾಭರಣ, ಹಣ ಕದ್ದ ಮಹಿಳೆಯನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್‌ನಿಂದ ಬೆಳಗಾವಿಗೆ ಆಗಮಿಸಿದ ಅಕ್ಷತಾ ಕೊಣ್ಣೂರ ಅವರು, ಬೆಳಗಾವಿ–ಬೀಡಿ ಮಾರ್ಗದ ಬಸ್ ಏರಿದ್ದರು. ಆಗ ಅಕ್ಷತಾ ಅವರ ಬ್ಯಾಗ್‌ನಲ್ಲಿದ್ದ ಪರ್ಸ್ ಕಳುವಾಗಿದೆ.
‘ಪರ್ಸ್‌ನಲ್ಲಿ 30 ಗ್ರಾಂ ಚಿನ್ನದ ಮಂಗಳಸೂತ್ರ, ₹5 ಸಾವಿರ ನಗದು ಇತ್ತು. ಅದು ಕಳ್ಳತನವಾಗಿದೆ’ ಎಂದು ತಕ್ಷಣವೇ ಪೊಲೀಸರ ಗಮನಕ್ಕೆ ತಂದಿದ್ದಾರೆ. ತ್ವರಿತವಾಗಿ ಪೊಲೀಸರು ಅಲ್ಲಿಗೆ ದೌಡಾಯಿಸಿದ್ದಾರೆ. ಆಗ ಕಿಟಕಿ ತೆರೆದು ಬಸ್‌ನ ಹೊರಗೆ ಮಂಗಳಸೂತ್ರ ಎಸೆಯಲಾಗಿದೆ.
ಇದರಿಂದ ಆರೋಪಿಗಳು ಬಸ್‌ನಲ್ಲೇ ಇದ್ದಾರೆ ಎಂದು ಶಂಕಿಸಿದ ಪೊಲೀಸರು, ಎಲ್ಲ ಪ್ರಯಾಣಿಕರ ತಪಾಸಣೆ ಆರಂಭಿಸಿದ್ದಾರೆ. ಆಗ ಕಳ್ಳತನ ಮಾಡಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾರೆ.
‘ಬೆಳಗಾವಿ ತಾಲ್ಲೂಕಿನ ಬೆಂಢಿಗೇರಿಯ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ಈ ಕೃತ್ಯ ಎಸಗಿದ್ದಾರೆ. ವಶಕ್ಕೆ ಪಡೆದ ಚಿನ್ನಾಭರಣ, ಹಣವನ್ನು ಅಕ್ಷತಾ ಅವರಿಗೆ ತಲುಪಿಸಿದ್ದೇವೆ’ ಎಂದು ಮಾರ್ಕೆಟ್ ಠಾಣೆ ಇನ್‌ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಅಕ್ಷತಾ ಅವರ ಪತಿ ಹೈದಾರಾಬಾದ್‌ನಲ್ಲಿ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಾರೆ. ಸಂಕ್ರಾಂತಿ ಹಬ್ಬಕ್ಕಾಗಿ ಅವರು ಊರಿಗೆ ಬಂದಾಗ ಘಟನೆ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.