ADVERTISEMENT

28ಕ್ಕೆ ಪಂಚಮಸಾಲಿ ಸಮಾಜದಿಂದ ‘ಚಲೋ ಬೆಳಗಾವಿ’

ಮೀಸಲಾತಿಗೆ ಆಗ್ರಹಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 13:50 IST
Last Updated 21 ಅಕ್ಟೋಬರ್ 2020, 13:50 IST
ಬೆಳಗಾವಿಯಲ್ಲಿ ಬುಧವಾರ ನಡೆದ ಪಂಚಮಸಾಲಿ ಸಮಾಜದ ಮುಖಂಡರ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸತ್ಕರಿಸಿದರುಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಬುಧವಾರ ನಡೆದ ಪಂಚಮಸಾಲಿ ಸಮಾಜದ ಮುಖಂಡರ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸತ್ಕರಿಸಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರವು 2ಎ ಹಾಗೂ ಕೇಂದ್ರವು ಒಬಿಸಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಅ.28ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಇಲ್ಲಿನ ಸುವರ್ಣ ವಿಧಾನಸೌಧದ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ಸಮಾಜದ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸರ್ಕಾರ ವಿವಿಧ ಸಮಾಜಗಳ ಅಭಿವೃದ್ಧಿಗೆ ನಿಗಮಗಳನ್ನು ಸ್ಥಾಪಿಸುತ್ತಿದೆ. ಅದಕ್ಕೆ ಅಧ್ಯಕ್ಷರ ನೇಮಕವೂ ಆಗುತ್ತಿದೆ. ಆದರೆ, ಲಿಂಗಾಯತ ಸಮಾಜಕ್ಕೆ ಯಾವುದೇ ನಿಗಮವಿಲ್ಲ. ಕೂಡಲೇ ಲಿಂಗಾಯತ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು’ ಎಂದರು.

ADVERTISEMENT

‘ಆರ್ಥಿಕ ಸಂಕಷ್ಟದಲ್ಲಿರುವ ಲಿಂಗಾಯತ ಸಮುದಾಯದ ಏಳಿಗೆಗೆ ಸರ್ಕಾರ ಕ್ರಮ ವಹಿಸಬೇಕು. ಕೃಷಿ ಕಾಯಕ ಮೇಲೆ ಅವಲಂಬಿತವಾಗಿರುವ ಸಮಾಜದವರ ಅಭಿವೃದ್ಧಿಗಾಗಿ ಈ ಮೀಸಲಾತಿ ಅಗತ್ಯವಿದೆ. ಜಿಲ್ಲೆ, ರಾಜ್ಯದಲ್ಲಿ ಸುಮಾರು ಶೇ 70ರಷ್ಟು ಮಂದಿ ಜೀವನ ರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಅವರಿಗೆ ಮೀಸಲಾತಿ ಒದಗಿಸಿದರೆ ಮುಖ್ಯವಾಹಿನಿಗೆ ಬರುವುದಕ್ಕೆ ಸಾಧ್ಯವಾಗುತ್ತದೆ. ಇದು ಎಲ್ಲ ಬಡ ಲಿಂಗಾಯತ ಒಳಪಂಗಡದವರಿಗೂ ಅನ್ವಯವಾಗಬೇಕು’ ಎಂದು ಹೇಳಿದರು.

ನಂತರ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಸಂಘಟಿತರಾಗಿ ಹೋರಾಡಿದರೆ ತಾರ್ಕಿಕ ಅಂತ್ಯ ಸಿಗುತ್ತದೆ. ಎಲ್ಲರೂ ಪಾಲ್ಗೊಂಡರೆ ಹೋರಾಟಕ್ಕೆ ಮತ್ತು ಹಕ್ಕೊತ್ತಾಯಕ್ಕೆ ಬೆಲೆ ಬರುತ್ತದೆ. ಆದರೆ, ನಾಳೆಯೇ ಬೇಡಿಕೆ ಈಡೇರುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ. ಯಾವುದಾದರೂ ಸಮಾಜ ಮೀಸಲಾತಿ ಕೇಳಿದಾಗ, ಇತರ ಸಮಾಜಗಳು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬಹುದು ಎನ್ನುವುದನ್ನು ಸರ್ಕಾರಗಳು ಯೋಚಿಸುತ್ತವೆ’ ಎಂದು ತಿಳಿಸಿದರು.

‘ಪ್ರಸ್ತುತ ಮತ ಬ್ಯಾಂಕ್ ರಾಜಕಾರಣ ಬಂದಿದೆ. ಹೀಗಾಗಿ, ಸಂಘಟನೆ ಬಲಗೊಳಿಸಬೇಕು. ನಮ್ಮ ಸಮಾಜವನ್ನು ಒಮ್ಮೆ ಎಬ್ಬಿಸಿದರೆ ಸಾಕು ನಂತರ ತಡೆಯಲಾಗುವುದಿಲ್ಲ’ ಎಂದರು.

ಮುಖಂಡ ಡಾ.ವಿಶ್ವನಾಥ ಪಾಟೀಲ, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿದರೆ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಬೇರೆ ಬೇರೆ ಸಮಾಜದ ಶ್ರೀಗಳು ಕೂಡ ಪಾಲ್ಗೊಂಡರೆ ಹೋರಾಟಕ್ಕೆ ಬಲ ಬರುತ್ತದೆ. ರಾಜಕೀಯ ಬೆರೆಸದೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು. ನಮ್ಮ ಮಕ್ಕಳಿಗೆ ಉನ್ನತಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿ ಮೀಸಲಾತಿ ಅತ್ಯಗತ್ಯವಾಗಿದೆ’ ಎಂದು ಹೇಳಿದರು.

ಮುಖಂಡರಾದ ಬಸವರಾಜ ರೊಟ್ಟಿ, ಅಡಿವೇಶ, ಸಿದ್ದನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.