
ಎಐ ಚಿತ್ರ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚೋರ್ಲಾ ಘಾಟ್‌ನಲ್ಲಿ ಮೂರು ತಿಂಗಳ ಹಿಂದೆ ನಡೆದಿದೆ ಎನ್ನಲಾದ ₹400 ಕೋಟಿ ದರೋಡೆ ಪ್ರಕರಣ ಕುರಿತು ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲ; ಕಂಟೇನರ್‌ಗಳ ಮಾಲೀಕರು ಯಾರು, ಚಾಲಕರು ಯಾರು ಎಂಬ ಸುಳಿವೂ ಸಿಕ್ಕಿಲ್ಲ.
‘ಚೋರ್ಲಾ ಘಾಟ್ ಮಾರ್ಗವಾಗಿ ಸಾಗಿಸುತ್ತಿದ್ದ ₹400 ಕೋಟಿ ದರೋಡೆ ಮಾಡಿದ್ದೇನೆ ಎಂದು ನನ್ನನ್ನು ಅಪಹರಿಸಿದ್ದರು’ ಎಂದು ಮಹಾರಾಷ್ಟ್ರದ ಸಂದೀಪ್ ಪಾಟೀಲ ಎಂಬುವರು ನೀಡಿದ ದೂರಿನ ಅನ್ವಯ ನಾಸಿಕ್ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆದಿದ್ದು, ಮಂಗಳವಾರ (ಜ.27) ಅಪಹರಣ ಮಾಡಿದ್ದ ಕಾರು ಚಾಲಕನ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈತ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯಲ್ಲ.
ಏತನ್ಮಧ್ಯೆ, ವಿಶೇಷ ತನಿಖಾ ತಂಡದ ವಶದಲ್ಲಿರುವ ಆರೋಪಿಗಳಾದ ಜಯೇಶ್ ಕದಂ, ವಿಶಾಲ್ ನಾಯ್ಡು, ಸುನಿಲ್ ಧುಮಾಲ್, ವಿರಾಟ್ ಗಾಂಧಿ, ಜನಾರ್ದನ್ ದೈಗುಡೆ ಮತ್ತು ಸಯ್ಯದ್ ಅಜರ್ ಅವರ ಕಸ್ಟಡಿ ಬುಧವಾರ (ಜ.28) ಕೊನೆಗೊಳ್ಳಲಿದೆ. ಹೀಗಾಗಿ, ಎಸ್‌ಐಟಿ ತಂಡ ಮಂಗಳವಾರವೇ ಅವರನ್ನು ಘಟನಾ ಸ್ಥಳಕ್ಕೆ ಕರೆತರಲಿದೆ ಎಂಬ ವದಂತಿ ಗಡಿಯಲ್ಲಿ ಹರಡಿತ್ತು.
ಆರೋಪಿಗಳಾದ ಕಿಶೋರ್ ಹಾಗೂ ಜಯೇಶ್ ಮಧ್ಯೆ ನಡೆದಿದೆ ಎನ್ನಲಾದ ಸಂಭಾಷಣೆಯಲ್ಲಿ ‘ಈ ಕಪ್ಪುಹಣವನ್ನು ತಿರುಪತಿಯ ಬಾಲಾಜಿ ಟ್ರಸ್ಟ್‌ನಲ್ಲಿ ಅಥವಾ ಅಹಮದಾಬಾದ್‌ನ ಆಶ್ರಮವೊಂದರಲ್ಲಿ ಚಲಾವಣೆಯ ಹಣವಾಗಿ ಬದಲಾವಣೆ ಮಾಡಿಕೊಳ್ಳಬಹುದು’ ಎಂಬ ಮಾತಿದೆ. ಎಸ್‌ಐಟಿ ತಂಡ ಈ ನಿಟ್ಟಿನಲ್ಲೂ ತನಿಖೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳವೂ ನಿಖರವಾಗಿಲ್ಲ:
ಚೋರ್ಲಾ ಘಾಟ್ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದ ಗಡಿಯಲ್ಲಿ ವ್ಯಾಪಿಸಿದೆ. ಇದರ ಮಾರ್ಗವು ಮೂರೂ ರಾಜ್ಯಗಳ ವ್ಯಾಪ್ತಿಯ ಕಾಡಿನಲ್ಲಿ ಹಾದುಹೋಗಿದೆ. ‘ಚೋರ್ಲಾ ಘಾಟ್‌ನಲ್ಲಿ ದರೋಡೆ ನಡೆದಿದೆ’ ಎಂಬ ಸಂದೀಪ್ ಪಾಟೀಲ ಅವರ ಹೇಳಿಕೆ ಸ್ಪಷ್ಟವಾಗಿಲ್ಲ. ಇದು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ ಎಂಬುದಕ್ಕೂ ಪುರಾವೆ ಇಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
‘ಚೋರ್ಲಾ ಘಾಟ್‌ನಲ್ಲಿ ದರೋಡೆ ನಡೆದ ಬಗ್ಗೆ ತನಿಖೆ ನಡೆಸಬೇಕು’ ಎಂದು ನಾಸಿಕ್ ಪೊಲೀಸರು ಬೆಳಗಾವಿ ಜಿಲ್ಲಾ ಎಸ್‌ಪಿಗೆ ಬರೆದ ಕಾರಣಕ್ಕೆ ಈ ಪ್ರಕರಣ ಬೆಳಗಾವಿಗೂ ತಳಕು ಹಾಕಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ‘ಸಂದೀಪ್ ಪಾಟೀಲ ನೀಡಿರುವ ದೂರು ವದಂತಿಯಂತೆ ಕಾಣುತ್ತಿದೆ’ ಎಂದು ಹೇಳಿದ್ದಾರೆ. ಹೀಗಾಗಿ, ಮಹಾರಾಷ್ಟ್ರದ ಎಸ್‌ಐಟಿ ತಂಡದ ಪ್ರತಿಕ್ರಿಯೆ ಮೇಲೆ ಇದರ ಸತ್ಯಾಸತ್ಯತೆ ತಿಳಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.