ಬೆಳಗಾವಿ: ನಗರದಲ್ಲಿ ಬಹಳ ವರ್ಷಗಳಿಂದ ಬೀಳುವ ಸ್ಥಿತಿಯಲ್ಲಿದ್ದ ಹಾಗೂ ಅಪಾಯಕಾರಿ ಎಂದು ಗುರುತಿಸಿದ್ದ ಮರಗಳನ್ನು ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯಿಂದ ತೆರವುಗೊಳಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆ ಮತ್ತು ಜೋರಾಗಿ ಬೀಸುತ್ತಿರುವ ಗಾಳಿಯಿಂದ ನಗರದ ವಿವಿಧೆಡೆ 30ಕ್ಕೂ ಅಧಿಕ ಮರ ಬಿದ್ದು ಅವಾಂತರ ಸೃಷ್ಟಿಯಾಗಿತ್ತು.
ಇಲ್ಲಿನ ಸದಾಶಿವ ನಗರ, ಶಾಹೂ ನಗರ, ಆಝಮ್ ನಗರ, ಸಹ್ಯಾದ್ರಿ ನಗರ, ಹನುಮಾನ ನಗರ, ಬಾಕ್ಸೈಟ್ ರಸ್ತೆ, ಎಪಿಎಂಸಿ ರಸ್ತೆ ಬದಿ ಮರಗಳು ಹುಲುಸಾಗಿ ಬೆಳೆದಿದ್ದವು. ದೂರದಿಂದ ಬರುವ ವಾಹನಗಳನ್ನು ಗುರುತಿಸಲು ಆಗದಂತೆ ಅದರ ರೆಂಬೆ–ಕೊಂಬೆ ಚಾಚಿಕೊಂಡಿದ್ದವು.
ಇನ್ನೂ ಕೆಲವೆಡೆ ಬೀದಿದೀಪಗಳನ್ನು ಬೆಳಗಿಸಿದರೂ, ರಸ್ತೆ ಮೇಲೆ ಮರಗಳ ನೆರಳಷ್ಟೇ ಬೀಳುತ್ತಿತ್ತು. ಬೀದಿದೀಪಗಳ ಬೆಳಕಿಗೂ ಮರ ಅಡ್ಡಬರುತ್ತಿದ್ದವು. ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಮಾರ್ಗದಲ್ಲೂ ಹಲವು ಅಪಾಯಕಾರಿ ಮರಗಳಿದ್ದವು. ಅವುಗಳನ್ನು ಈಗ ಕತ್ತರಿಸಿ ಸಾರ್ವಜನಿಕರು ಮತ್ತು ವಾಹನಗಳ ಸವಾರರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ.
ನಗರದ ವಿವಿಧ ಮಾರ್ಗಗಳ ರಸ್ತೆ ವಿಭಜಕಗಳಲ್ಲಿ ಹಚ್ಚಿದ್ದ ಆಲಂಕಾರಿಕ ಸಸಿಗಳೂ ಹುಲುಸಾಗಿ ಬೆಳೆದು, ಪಕ್ಕದಲ್ಲಿ ಹಾದುಹೋಗುವ ಸವಾರರಿಗೂ ತಾಗುತ್ತಿದ್ದವು. ಹಾಗಾಗಿ ವಿಭಜಕ ಸ್ವಚ್ಛಗೊಳಿಸಿ, ಆ ಸಸಿಗಳನ್ನೂ ಸಫೂರಗೊಳಿಸಲಾಗುತ್ತಿದೆ.
‘ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಸಾಗುವ ಮಾರ್ಗ ಮತ್ತು ನಗರದ ಮುಖ್ಯರಸ್ತೆಗಳಲ್ಲಿನ ಅಪಾಯಕಾರಿ ಮರ ತೆರವುಗೊಳಿಸುತ್ತಿದ್ದೇವೆ. ಕೆಲವೆಡೆ ಮರಗಳ ಟೊಂಗೆ ಕತ್ತರಿಸುತ್ತಿದ್ದೇವೆ. ಮರಗಳ ಟೊಂಗೆ ತುಂಬಾ ಎತ್ತರದಲ್ಲಿದ್ದರೆ, ಹೈಡ್ರೋಲಿಕ್ ಲಿಫ್ಟರ್ ಬಳಸಿ ಕಟಾವು ಮಾಡುತ್ತಿದ್ದೇವೆ’ ಎಂದು ಮಹಾನಗರ ಪಾಲಿಕೆಯ ತೋಟಗಾರಿಕೆ ನಿರೀಕ್ಷಕ ರಿಜ್ವಾನ್ ನಾಲತವಾಡ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದಲ್ಲಿನ ಅಪಾಯಕಾರಿ ಮರಗಳನ್ನು ತೆರವುಗೊಳಿಸದ್ದರಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ ಆ.4ರ ಸಂಚಿಕೆಯಲ್ಲಿ ‘ಅಪಾಯಕಾರಿ ಮರಗಳ ತೆರವು ಕಾರ್ಯ ನಿಧಾನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.