ಪಿಯು ಕಾಲೇಜಿನ ತರಗತಿ ಮುಗಿಯುವುದನ್ನು ಕಾಯುತ್ತ, ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಕುಳಿತಿರುವುದು
ಪ್ರಜಾವಾಣಿ ಚಿತ್ರ
ಬೆಳಗಾವಿ: ಇಲ್ಲಿನ ಸರ್ಕಾರಿ ಸರದಾರ್ಸ್ ಪಿಯು ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದ ಕಡ್ಡಾಯವಾಗಿ ಪರಿಹಾರ ಬೋಧನೆ ತರಗತಿ ನಡೆಸಲಾಗುತ್ತಿದೆ. ಇದು ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಂಕಷ್ಟ ತಂದಿದೆ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿರುವ ಮಹಿಳಾ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ರಾಮತೀರ್ಥ ನಗರದಲ್ಲಿ ಜಾಗವನ್ನು ಇದೇ ವರ್ಷ ಏಪ್ರಿಲ್‌ನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಮಂಜೂರುಗೊಳಿಸಿದೆ.
ಆದರೆ, ಸರ್ಕಾರ ಇನ್ನೂ ನಿವೇಶನದ ಶುಲ್ಕ (ಮಾರುಕಟ್ಟೆ ಮೌಲ್ಯದ ಅರ್ಧದಷ್ಟು) ಪಾವತಿಸಿಲ್ಲ. ಹಾಗಾಗಿ ಕಟ್ಟಡ ಕಾಮಗಾರಿ ಆರಂಭವಾಗದೆ, ಸರದಾರ್ಸ್ ಪಿಯು ಕಾಲೇಜಿನ ಕಟ್ಟಡದಲ್ಲೇ ಮಹಿಳಾ ಕಾಲೇಜು ನಡೆಯುತ್ತಿದೆ.
ಕಳೆದ ವರ್ಷ ಬೆಳಿಗ್ಗೆ 7.50ರಿಂದ ಮಧ್ಯಾಹ್ನ 12.30ರವರೆಗೆ ಈ ಕಟ್ಟಡದಲ್ಲಿ ಪಿಯು ತರಗತಿ ನಡೆಯುತ್ತಿದ್ದವು. ನಂತರ ಮಹಿಳಾ ಕಾಲೇಜಿನ ತರಗತಿ ಸಂಘಟಿಸಲಾಗುತ್ತಿತ್ತು. ಆದರೆ, 2024–25ನೇ ಸಾಲಿನ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಈ ಕಾಲೇಜು ಶೇ 49ರಷ್ಟು ಫಲಿತಾಂಶ ಮಾತ್ರ ದಾಖಲಿಸಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು, ‘2025–26ನೇ ಸಾಲಿನಲ್ಲಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ವಹಿಸಬೇಕು’ ಎಂದು ಪ್ರಾಚಾರ್ಯರಿಗೆ ಸೂಚಿಸಿದ್ದಾರೆ. ಈ ಮಧ್ಯೆ, ಈ ವರ್ಷ ಕಾಲೇಜಿನ ವೇಳಾಪಟ್ಟಿಯೂ ಬದಲಾಗಿದ್ದು, 920 ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8.15ರಿಂದ ಮಧ್ಯಾಹ್ನ 3.15ರವರೆಗೆ ತರಗತಿ ಸಂಘಟಿಸಲಾಗುತ್ತಿದೆ. ವಿಜ್ಞಾನ ಹೊರತುಪಡಿಸಿ, ಕಲಾ, ವಾಣಿಜ್ಯ ವಿಭಾಗದ ತರಗತಿಗಳಷ್ಟೇ 2.15ಕ್ಕೆ ಮುಗಿಯುತ್ತಿವೆ. ತಡವಾಗಿ ಪಿಯು ಕಾಲೇಜಿನ ಕೊಠಡಿಗಳು ಲಭಿಸುತ್ತಿರುವ ಕಾರಣ, ಬೋಧನಾ ಚಟುವಟಿಕೆ ಕೈಗೊಳ್ಳಲು ಮಹಿಳಾ ಕಾಲೇಜಿನವರು ಪರದಾಡುತ್ತಿದ್ದಾರೆ.
‘ಪದವಿ ಓದುವ ಆಸೆಯಿಂದಾಗಿ ವಿವಿಧ ಹಳ್ಳಿಗಳಿಂದ ಇಲ್ಲಿಗೆ ಬರುತ್ತಿದ್ದೇವೆ. ಆದರೆ, ಕಲಿಕೆಗೆ ಪೂರಕವಾಗಿ ಕೊಠಡಿಗಳಿಲ್ಲ. ಪಿಯು ಕಾಲೇಜಿನ ವಿದ್ಯಾರ್ಥಿಗಳು ಹೊರಬರುವುದನ್ನೇ ಕಾಯುತ್ತ ವರಾಂಡ, ಬಯಲು ಪ್ರದೇಶದಲ್ಲಿ ಕುಳಿತು ಓದುತ್ತಿದ್ದೇವೆ’ ಎಂದು ವಿದ್ಯಾರ್ಥಿನಿಯರು ಅಲವತ್ತುಕೊಂಡರು.
ಬೆಳಗಾವಿಯ ಸರ್ಕಾರಿ ಸರದಾರ್ಸ್ ಪಿಯು ಕಾಲೇಜಿನ ಕಟ್ಟಡದಲ್ಲೇ ಮಹಿಳಾ ಕಾಲೇಜಿನ ತರಗತಿ ನಡೆಯುತ್ತಿರುವುದು
ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳಿಗೆ ಈಗ ಪರಿಹಾರ ಬೋಧನೆ ಮಾಡುತ್ತಿದ್ದೇವೆ. ಮುಂದಿನ ತಿಂಗಳಿಂದ ಇನ್ನೂ ಒಂದು ತಾಸು ತರಗತಿ ನಡೆಸಲಾಗುವುದುವೈ.ಎಂ.ಪಾಟೀಲ ಪ್ರಾಚಾರ್ಯ ಸರ್ಕಾರಿ ಸರದಾರ್ಸ್ ಪಿಯು ಕಾಲೇಜು
‘ಸ್ಟೋರ್ ರೂಂ ಬಳಸಿಕೊಳ್ಳುತ್ತಿದ್ದೇವೆ’:
‘ಪಿಯು ಕಾಲೇಜಿನ ಕಟ್ಟಡದಲ್ಲಿ ಮೂರು ಕೊಠಡಿ ನಮಗೇ ಕೊಟ್ಟಿದ್ದಾರೆ. ಬಿ.ಕಾಂ ಓದುತ್ತಿರುವ 227 ವಿದ್ಯಾರ್ಥಿನಿಯರಿಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1.20ರವರೆಗೆ ಅಲ್ಲಿ ತರಗತಿ ನಡೆಸುತ್ತಿದ್ದೇವೆ. ಆದರೆ ಬಿ.ಎ ಓದುತ್ತಿರುವ 415 ವಿದ್ಯಾರ್ಥಿನಿಯರಿಗೆ ಮಧ್ಯಾಹ್ನ 12.30ರಿಂದ ಸಂಜೆ 5ರವರೆಗೆ ತರಗತಿ ಸಂಘಟಿಸಲು ಕೊಠಡಿ ಸಾಲುತ್ತಿಲ್ಲ. ಹಾಗಾಗಿ ಆದ್ಯತೆ ಮೇರೆಗೆ ಕಡ್ಡಾಯ ವಿಷಯಗಳ ತರಗತಿ ನಡೆಸುತ್ತಿದ್ದೇವೆ. ಐಚ್ಛಿಕ ವಿಷಯ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಕಷ್ಟವಾಗುತ್ತಿದ್ದು ಸ್ಟೋರ್‌ರೂಂ ಸಹ ಬಳಸಿಕೊಳ್ಳುತ್ತಿದ್ದೇವೆ’ ಎಂದು ಮಹಿಳಾ ಕಾಲೇಜಿನ ಪ್ರಾಚಾರ್ಯ ಎನ್.ಆರ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪಿಯು ತರಗತಿ ಮುಗಿದ ನಂತರ 10ಕ್ಕೂ ಅಧಿಕ ಕೊಠಡಿ ನಮಗೆ ಸಿಗುತ್ತವೆ. ಆದರೆ ಅಲ್ಲಿಯವರೆಗೆ ಕಾದು ನಮ್ಮ ತರಗತಿ ಆರಂಭಿಸಿದರೆ ಸಂಜೆ 6ರ ನಂತರ ಬೋಧನಾ ಚಟುವಟಿಕೆ ಮುಗಿಯುತ್ತವೆ. ನಂತರ ವಿವಿಧ ಗ್ರಾಮಗಳಿಗೆ ತೆರಳಲು ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತದೆ’ ಎಂದರು.
‘ಅತಿಥಿ ಉಪನ್ಯಾಸಕರೂ ಇಲ್ಲ’:
ಮಹಿಳಾ ಕಾಲೇಜಿನಲ್ಲಿ 12 ಕಾಯಂ ಉಪನ್ಯಾಸಕರು 8 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಜುಲೈ 15ರಿಂದ ಪ್ರಸಕ್ತ ಸಾಲಿನ ತರಗತಿ ಆರಂಭವಾಗಿವೆ. ಈ ಪೈಕಿ 8 ಅತಿಥಿ ಉಪನ್ಯಾಸಕರು ಸರ್ಕಾರದ ಆದೇಶದಂತೆ ಆಗಸ್ಟ್ 2ರಂದು ಸೇವೆಯಿಂದ ಬಿಡುಗಡೆಯಾಗಿದ್ದಾರೆ. ಹಾಗಾಗಿ ವಿವಿಧ ವಿಷಯಗಳ ಬೋಧನೆಗಾಗಿ ಈಗ ಅತಿಥಿ ಉಪನ್ಯಾಸಕರೂ ಇಲ್ಲದೆ ಬೋಧನೆಗೆ ತೊಡಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.