ADVERTISEMENT

ಸಹಕಾರ ಬ್ಯಾಂಕ್‌ ಚುನಾವಣೆ: ‘ಸಾಹುಕಾರ’ಗಳ ಕೈಯಲ್ಲಿ ‘ಬಡವರ’ ಬ್ಯಾಂಕ್‌

ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಚುನಾವಣೆ

ಸಂತೋಷ ಈ.ಚಿನಗುಡಿ
Published 26 ಸೆಪ್ಟೆಂಬರ್ 2025, 2:52 IST
Last Updated 26 ಸೆಪ್ಟೆಂಬರ್ 2025, 2:52 IST
<div class="paragraphs"><p>ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌</p></div>

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌

   

ಬೆಳಗಾವಿ: ಬಡವರ ಆಶಾಕಿರಣವಾಗಿ ಬೆಳೆದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ಈಗ ‘ಸಾಹುಕಾರ’ಗಳದ್ದೇ ಆಡಂಬರ. ಜಿಲ್ಲೆಯ ರಾಜಕಾರಣದ ಮೇಲೆ ಈ ಬ್ಯಾಂಕ್‌ ನೇರ ಪ್ರಭಾವ ಬೀರುವ ಕಾರಣ, ಎಲ್ಲರೂ ಇದರ ನಿರ್ದೇಶಕರಾಗಬೇಕು ಎಂದು ಬಯಸುತ್ತಿದ್ದಾರೆ. ಸಚಿವ, ಶಾಸಕ, ಸಂಸದರೂ ತಿಂಗಳಾನುಗಟ್ಟಲೇ ಹಳ್ಳಿಗಳಲ್ಲಿ ಬೀಡು ಬಿಟ್ಟಿದ್ದಾರೆ. ಅಷ್ಟರಮಟ್ಟಿಗೆ ಈ ಬ್ಯಾಂಕು ‘ಡಿಮ್ಯಾಂಡ್‌’ ಬೆಳೆಸಿಕೊಂಡಿದೆ. 

ಸಹಕಾರ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ತರಬಾರದು ಎಂಬುದು ಮೂಲ ಧ್ಯೇಯ. ಆದರೆ, ಬ್ಯಾಂಕಿನ ಮೇಲೆ ಹಿಡಿತ ಸಾಧಿಸಲು ಹೊರಟ ಪ್ರತಿಯೊಬ್ಬರೂ ರಾಜಕೀಯ ಕಸುಬುದಾರರೇ ಆಗಿದ್ದಾರೆ. ರಾಜಕೀಯದ ಹೊರತಾಗಿ ಈ ಬ್ಯಾಂಕನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ ಎಂಬುದು ಹಿರಿಯ ಸಹಕಾರಿಗಳ ಬೇಸರ.

ADVERTISEMENT

ಡಿಸಿಸಿ ಬ್ಯಾಂಕುಗಳು ಶೇ 70ರಷ್ಟು ಸಣ್ಣ ರೈತರಿಗೇ ಸಾಲ ನೀಡುತ್ತವೆ. ಅದು ಕೂಡ ಶೂನ್ಯ ಬಡ್ಡಿ ದರದಲ್ಲಿ ಬೆಳೆಸಾಲ, ವಾಹನ ಸಾಲಗಳನ್ನು ನೀಡುತ್ತವೆ. ಉಳಿದಂತೆ ಸ್ವಸಹಾಯ ಸಂಘಗಳಿಗೆ, ಸಣ್ಣ ವ್ಯಾಪಾರಿಗಳಿಗೆ ಜೀವನೋಪಾಯ ಸಾಲದಿಂದ ಹಿಡಿದು ಸಕ್ಕರೆ ಕಾರ್ಖಾನೆಗಳಂಥ ಬೃಹತ್‌ ಉದ್ಯಮಗಳಿಗೂ ಬಡ್ಡಸಹಿತ ಸಾಲ ನೀಡುತ್ತವೆ. ಈ ಸಾಲ ಅಥವಾ ಬಡ್ಡಿಮನ್ನಾ ಉದ್ದೇಶಕ್ಕೆ ನಿರ್ದೇಶಕರ ‘ನಿರ್ದೇಶನ’ ಅಗತ್ಯ. ಇದೇ ಕಾರಣಕ್ಕೆ ಶತಾಯ– ಗತಾಯ ಬ್ಯಾಂಕಿನ ಚುಕ್ಕಾಣಿ ಹಿಡಿದೇ ತೀರಬೇಕು ಎಂದು ಸಾಹುಕಾರಗಳು ಜಿದ್ದಿಗೆ ಬಿದ್ದಿದ್ದಾರೆ ಎನ್ನುತ್ತಾರೆ ಅನುಭವಿಗಳು.

ಆಸಕ್ತಿಗೆ ಹಲವು ಕಾರಣ: ಜಿಲ್ಲೆಯಲ್ಲಿ 501 ಗ್ರಾಮ ಪಂಚಾಯಿತಿಗಳೂ 1,500ಕ್ಕೂ ಹೆಚ್ಚು ಗ್ರಾಮಗಳಿವೆ. ಪ್ರತಿ ಗ್ರಾಮದಲ್ಲೂ ಪಿಕೆಪಿಎಸ್‌, ಹಾಲು ಒಕ್ಕೂಟ ಅಥವಾ ಇತರೇ ಸಹಕಾರ ಸಂಘಗಳಿವೆ. ಇವೆಲ್ಲಕ್ಕೂ ಆಲದ ಮರವಾಗಿ ನಿಂತಿದೆ ಬಿಡಿಸಿಸಿ. ಜಿಲ್ಲೆಯ ಯಾವುದೇ ಚುನಾವಣೆ ಮೇಲೆ ನೇರವಾದ ಪರಿಣಾಮ ಬೀರುವ ಸಾಮರ್ಥ್ಯ ಈ ಬ್ಯಾಂಕಿಗಿದೆ. ಯಾರು ಈ ಬ್ಯಾಂಕಿನ ನಿರ್ದೇಶಕರಾಗಿ ಇರುತ್ತಾರೋ ಅವರಿಗೆ ಆ ಇಡೀ ತಾಲ್ಲೂಕಿನ ಮೇಲೆ ಹಿಡಿತ ಸಿಗುತ್ತದೆ.

ಮೇಲಾಗಿ, 40 ಲಕ್ಷ ರೈತರನ್ನು ಈ ಬ್ಯಾಂಕ್‌ ಪ್ರತ್ಯಕ್ಷ– ಪರೋಕ್ಷವಾಗಿ ಆಲಿಂಗಿಸಿಕೊಂಡಿದೆ. ಕಳೆದ ವರ್ಷ ₹8,000 ಕೋಟಿಗೂ ಅಧಿಕ ಠೇವಣಿ ಸಂಗ್ರಹ, ₹5,200 ಕೋಟಿಗೂ ಅಧಿಕ ರೈತ ಸಾಲ ವಿತರಿಸಿದೆ. ಇಷ್ಟು ದೊಡ್ಡ ಆರ್ಥಿಕ ಬಲ ಹೊಂದಿದ ಬ್ಯಾಂಕಿನ ಮೇಲೆ ಪ್ರಭಾವ ಬೀರಿದರೆ ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯ ಎಂಬುದು ರಾಜಕಾರಣಿಗಳ ಲೆಕ್ಕಾಚಾರ ಎನ್ನುತ್ತಾರೆ ಅನುಭವಿಗಳು.

ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೇ ಇದೇ ಬ್ಯಾಂಕ್‌ ‘ಪಲ್ಲಕ್ಕಿ’ ಹೊತ್ತು ತರಲಿದೆ ಎಂಬುದು ರಾಜಕಾರಣಿಗಳ ಆಳ–ಅಗಲ ವಿಚಾರ.

‘ಎಡಬಿಡಂಗಿ’ ಸಾಲಗಳಿಗೂ ದಾರಿ

ಜಿಲ್ಲೆಯ ಕೆಲವು ಸಕ್ಕರೆ ಕಾರ್ಖಾನೆಗಳು ಉದ್ಯಮ ವಲಯಗಳು ಕೈಗಾರಿಕೆಗಳು ಕೂಡ ಸಾಲ ಪಡೆದಿವೆ. ಆದರೆ ಇವು ‘ಎಡಬಿಡಂಗಿ’ ಸಾಲಗಳಾಗಿವೆ ಎಂಬ ಆರೋಪ ವರ್ಷದುದ್ದಕ್ಕೂ ಹೊಗೆಯಾಡುತ್ತ ಬಂದಿದೆ. ಕೆಲವರು ಬಂದ್‌ ಬಿದ್ದ ಕಾರ್ಖಾನೆಗಳನ್ನು ತೋರಿಸಿ ಸಾಲ ಪಡೆದಿದ್ದಾರೆ. ಮತ್ತೆ ಕೆಲವರು ‘ಸ್ಟಾಕ್‌’ ಇಲ್ಲದಿದ್ದರೂ ಇದೆ ಎಂಬ ದಾಖಲೆ ತೋರಿಸಿ ಸಾಲ ಪಡೆದಿದ್ದಾರೆ ಎಂಬ ಆರೋಪಗಳೂ ಇವೆ. ಅಂದರೆ; ಸಕಾರಣ ನೀಡಿ ಸಾಲ ಪಡೆದಿಲ್ಲ ಯಾವ ಕಾರಣಕ್ಕೆ ಸಾಲ ಪಡೆದರೋ ಅದನ್ನು ಈಡೇರಿಸಿಕೊಂಡಿಲ್ಲ. ಇಂಥ ಸಾಲಗಳ ಮಂಜೂರಾತಿ ಮನ್ನಾ ಅಥವಾ ವಸೂಲಾತಿ ವಿಚಾರದಲ್ಲಿ ನಿರ್ದೇಶಕರ ನಿರ್ದೇಶನ ಅನಿವಾರ್ಯ. ಬ್ಯಾಂಕ್‌ ನಿರ್ದೇಶಕನಾಗುವುದು ಶಾಸಕನಾದಷ್ಟೇ ಮಹತ್ವದ್ದು ಎಂಬುದು ಕೆಲವರ ಲೆಕ್ಕಾಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.